ಮಾರ್ಗೋವ್ ರೈಲು ನಿಲ್ದಾಣದಲ್ಲಿ ಪತಿಯ ಸಾವು: ನಿಷ್ಪಕ್ಷಪಾತ ತನಿಖೆಗೆ ಮಂಗಳೂರಿನ ಮಹಿಳೆ ಆಗ್ರಹ
ಮಂಗಳೂರು: ಅಕ್ಟೋಬರ್ 11 ರಂದು ಮಾರ್ಗೋವ್ ರೈಲು ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನರಾದ ತಮ್ಮ ಪತಿ ಲ್ಯಾನ್ಸಿ ಮಿನೇಜಸ್ ಅವರ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮಂಗಳೂರಿನ ವಿಕ್ಟೋರಿಯಾ ಮೇಬಲ್ ಮಿನೇಜಸ್ ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ವಿಕ್ಟೋರಿಯಾ ಅವರು, ’ತುರ್ತು ವೈದ್ಯಕೀಯ ನೆರವು ನೀಡುವಲ್ಲಿ ವಿಳಂಬವಾಗಿದೆ ಮತ್ತು ರೈಲು ನಿಲ್ದಾಣಗಳಲ್ಲಿ ತುರ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿದೆ. ರೈಲು ನಿಲ್ದಾಣಗಳು ಹಾಗೂ ಸಾರ್ವಜನಿಕ ಸಾರಿಗೆ ತಂಗುದಾಣಗಳಲ್ಲಿ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ, ಆಂಬ್ಯುಲೆನ್ಸ್ ಹಾಗೂ ಡಿಫಿಬ್ರಿಲೇಟರ್ಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ, ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಜನರಿಗೆ ಸಿಪಿಆರ್ ತರಬೇತಿ ನೀಡಬೇಕು’ ಎಂದು ಕರೆ ನೀಡಿದ್ದಾರೆ.
ನೇತ್ರಾವತಿ ಎಕ್ಸ್ಪ್ರೆಸ್ ರೈಲನ್ನು ಹತ್ತುವಾಗ ಲಗೇಜ್ ಇಡಲು ನೆರವಾಗುತ್ತಿದ್ದಾಗ ಅವರ ಪತಿ ದಿಢೀರನೆ ಕುಸಿದು ಬಿದ್ದರು. ಈ ತುರ್ತು ಸಮಯದಲ್ಲಿ ತಕ್ಷಣದ ವೈದ್ಯಕೀಯ ನೆರವು ಪಡೆಯುವುದು ಕಷ್ಟವಾಯಿತು. ಅವರ ಸಾವಿಗೆ ಕಾರಣವಾದ ಪರಿಸ್ಥಿತಿಯ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕೊಂಕಣ ರೈಲ್ವೆ, ಪ್ರಯಾಣಿಕರ ಟಿಕೆಟ್ ಪರಿಶೀಲಕರು (ಟಿಟಿಇ) ವೈದ್ಯಕೀಯ ನೆರವು ನೀಡಲು ಕಮರ್ಷಿಯಲ್ ಕಂಟ್ರೋಲ್ ಮತ್ತು ರೈಲ್ವೆ ಸುರಕ್ಷತಾ ಪಡೆಗೆ (ಆರ್ಪಿಎಫ್) ತಕ್ಷಣ ಮಾಹಿತಿ ನೀಡಿದ್ದರು ಎಂದು ತಿಳಿಸಿದೆ.
ಕುಟುಂಬಕ್ಕೆ ನೆರವಾಗಲು ರೈಲನ್ನು ಕೊಂಚ ಸಮಯ ತಡೆಹಿಡಿಯಲಾಗಿತ್ತು ಮತ್ತು ನಿಗದಿತ ರೈಲ್ವೆ ನಿಯಮಾವಳಿಗಳಿಗೆ ಅನುಗುಣವಾಗಿಯೇ ನೆರವು ನೀಡಲು ಕ್ರಮ ಕೈಗೊಳ್ಳಲಾಗಿತ್ತು ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.