ಎಂಆರ್‌ಪಿಎಲ್‌ನಲ್ಲಿ ಜಾಗೃತ ಅರಿವು ಸಪ್ತಾಹಕ್ಕೆ ಚಾಲನೆ
ಉದ್ಘಾಟಿಸಿ ಮಾತನಾಡಿದ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್, ಜಾಗೃತಿಯು ಪ್ರತಿಯೊಬ್ಬರ ಸಾಮೂಹಿಕ ಜವಾಬ್ದಾರಿಯಾಗಿದೆ. ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ನ್ಯಾಯಸಮ್ಮತತೆ, ನಿಷ್ಪಕ್ಷಪಾತ ಮತ್ತು ಹೊಣೆಗಾರಿಕೆಗೆ ಆದ್ಯತೆ ನೀಡಬೇಕು ಎಂದರು. ಸಾರ್ವಜನಿಕ ಹಣ, ಕೈಗಾರಿಕಾ ಘಟಕಗಳ ನಿರ್ವಹಣೆ ಹಾಗೂ ಗುತ್ತಿಗೆಗಳ ವಿತರಣೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ನೌಕರರಿಗೆ ಕರೆ ನೀಡಿದರು.
ನಿರ್ದೇಶಕ (ರಿಫೈನರಿ) ನಂದಕುಮಾರ್ ವೇಲಾಯುಧನ್ ಪಿಳ್ಳೈ ಮಾತನಾಡಿ, ಪ್ರಾಮಾಣಿಕತೆ ದೈನಂದಿನ ಕಾರ್ಯನಿರ್ವಹಣೆ ಮತ್ತು ನಿರ್ಧಾರಗಳಲ್ಲಿ ಪ್ರತಿಫಲಿಸಬೇಕು. ಪ್ರಾಮಾಣಿಕತೆಯಿಂದ ತಕ್ಷಣದ ಪ್ರತಿಫಲ ದೊರೆಯದಿದ್ದರೂ, ಅದು ನೀಡುವ ಮನಶ್ಶಾಂತಿ ಮಹತ್ವದ್ದಾಗಿದೆ ಎಂದರು.
ನಿರ್ದೇಶಕ (ಹಣಕಾಸು) ದೇವೇಂದ್ರ ಕುಮಾರ್ ಮಾತನಾಡಿ, ಹಣಕಾಸು ನಿರ್ವಹಣೆಯಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಮುಖ್ಯ. ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಗರಿಷ್ಠ ಪ್ರಯೋಜನ ಒದಗಿಸುವುದು ಅಗತ್ಯ ಎಂದು ತಿಳಿಸಿದರು.
ಮುಖ್ಯ ಜಾಗೃತಾಧಿಕಾರಿ ಮೊಹಮ್ಮದ್ ಅಲಿ ಶಿಹಾಬ್ ಎ. ಅವರು, ಭ್ರಷ್ಟಾಚಾರ ಮತ್ತು ಅಸಮರ್ಥತೆಯಿಂದ ಉಂಟಾಗುವ ನಷ್ಟವು ಸಮಾಜದ ಅಭಿವೃದ್ಧಿಗೆ ಬಳಸಬಹುದಾದ ಅವಕಾಶಗಳನ್ನು ಕಸಿದುಕೊಳ್ಳುತ್ತದೆ. ಪ್ರಾಮಾಣಿಕ ಆಡಳಿತವು ರಾಷ್ಟ್ರ ನಿರ್ಮಾಣ ಹಾಗೂ ಸಂಸ್ಥೆಗಳ ಮೇಲಿನ ವಿಶ್ವಾಸಕ್ಕೆ ಅಡಿಪಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ಜಾಗೃತ ಆಯೋಗದ ಸಂದೇಶಗಳನ್ನು ವಾಚಿಸಲಾಯಿತು. ಬಳಿಕ ಸಂಸ್ಥೆಯ ಅಧಿಕಾರಿಗಳು ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಜಾಗೃತ ಪ್ರತಿಜ್ಞಾವಿಧಿ ಬೋಧಿಸಿದರು.
ಮುಖ್ಯ ವ್ಯವಸ್ಥಾಪಕ (ಮಾನವ ಸಂಪನ್ಮೂಲ) ಮನೋಜ್ ಕುಮಾರ್ ಸ್ವಾಗತಿಸಿದರು. ಜಾಗೃತ ವಿಭಾಗದ ವ್ಯವಸ್ಥಾಪಕ ಜಯೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ಕೇಶವ ಕುಮಾರ್ ವಂದಿಸಿದರು.