ಹಕ್ಕುಪತ್ರ, ನಿವೇಶನಕ್ಕಾಗಿ ಒತ್ತಾಯ: ಆದಿವಾಸಿ ಕೊರಗ ಸಮುದಾಯದವರಿಂದ ಅರೆ ಬೆತ್ತಲೆ ಮೆರವಣಿಗೆ

ಹಕ್ಕುಪತ್ರ, ನಿವೇಶನಕ್ಕಾಗಿ ಒತ್ತಾಯ: ಆದಿವಾಸಿ ಕೊರಗ ಸಮುದಾಯದವರಿಂದ ಅರೆ ಬೆತ್ತಲೆ ಮೆರವಣಿಗೆ


ಮಂಗಳೂರು: ಕೊರಗ ಸಮುದಾಯದವರಿಗೆ ಹಕ್ಕುಪತ್ರ ಮತ್ತು ನಿವೇಶನವನ್ನು ಶೀಘ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಆದಿವಾಸಿ ಕೊರಗ ಸಮುದಾಯದವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ವಾಮಂಜೂರಿನಿಂದ ಪಡೀಲ್ ಜಿಲ್ಲಾಡಳಿತ ಸಂಕೀರ್ಣ ‘ಪ್ರಜಾಸೌಧ’ದವರೆಗೆ ಸೋಮವಾರ ಅರೆಬೆತ್ತಲೆ ಮೆರವಣಿಗೆ ನಡೆಸಿದರು. 


ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರ ಶಿಷ್ಯರಾದ ವೆಂಕೋಜಿ ರಾವ್ ಅವರು ಕೊರಗ ಸಮುದಾಯಕ್ಕೆ ವಸತಿ ನಿವೇಶನಗಳನ್ನು ಒದಗಿಸಲೆಂದೇ 8 ಎಕರೆ ಜಮೀನನ್ನು ಸ್ವಾತಂತ್ರ್ಯಪೂರ್ವದಲ್ಲೇ ದಾನ ಮಾಡಿದ್ದರು. ಕೊರಗ ಸಮುದಾಯವು ನಿರಂತರ ಹೋರಾಟ ನಡೆಸಿದ ನಂತರ, ಮಂಗಳೂರು ಮಹಾನಗರ ಪಾಲಿಕೆಯು ವರ್ಷದ ಹಿಂದೆಯೇ 33 ಕೊರಗ ಕುಟುಂಬಗಳ ಜಮೀನು ಹಂಚಿಕೆ ಮಾಡಲು ಹಕ್ಕುಪತ್ರಗಳನ್ನು ಸಿದ್ಧಪಡಿಸಿತ್ತು. ಈ ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರವನ್ನು ತ್ವರಿತವಾಗಿ ವಿತರಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.


ವಾಮಂಜೂರು ಜಂಕ್ಷನ್‌ನಿಂದ ಆರಂಭವಾದ ಮೆರವಣಿಗೆಯನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಕೃಷ್ಣಪ್ಪ ಕೊಂಚಾಡಿ ಉದ್ಘಾಟಿಸಿದರು. ವಾಮಂಜೂರಿನಿಂದ ಕುಡುಪು-ಕುಲಶೇಖರ-ಬಿಕರ್ನಕಟ್ಟೆ-ನಂತೂರು, ಪಂಪ್‌ವೆಲ್ ನಾಗುರಿ ಮಾರ್ಗವಾಗಿ ಪಡೀಲ್ನ ಜಿಲ್ಲಾಡಳಿತ ಕಚೇರಿ ಸಂಕೀರ್ಣದವರೆಗೆ ಪ್ರತಿಭಟನಕಾರರು ಅರೆಬೆತ್ತಲೆಯಾಗಿ ಸಾಗಿದರು. ತಮ್ಮ ಸಾಂಪ್ರದಾಯಿಕ ವಾದ್ಯವಾದ ಡೊಳ್ಳುಗಳನ್ನು ಬಾರಿಸುತ್ತಾ ಸಾಗಿದರು. 


ಸ್ವಾತಂತ್ರ ಪೂರ್ವದಿಂದಲೂ ವಾಮಂಜೂರು ಪರಿಸರದಲ್ಲಿ ಬದುಕು ಕಟ್ಟಿಕೊಂಡಿರುವ ಕೊರಗ ಕುಟುಂಬಗಳ ಹಕ್ಕುಪತ್ರ ಪಡೆಯುವ ಕನನು ಇನ್ನೂ ನನಸಾಗಿಲ್ಲ. ನಮ್ಮ ನ್ಯಾಯಯುತ ಬೇಡಿಕೆ ಕುರಿತು ಹಲವು ಬಾರಿ ಸರ್ಕಾರದ ಗಮನ ಸೆಳೆದರೂ ಸ್ಪಂದನೆ ಸಿಕ್ಕಿಲ್ಲ. ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು.  

‘ಪ್ರಜಾಸೌಧ’ದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವಾಮಂಜೂರು ಘಟಕದ ಸಂಚಾಲಕ ಕರಿಯ ಕೆ.,‘ವಾಮಂಜೂರಿನ ಮಂಗಳಜ್ಯೋತಿ ಪರಿಸರದಲ್ಲಿರುವ ಕೊರಗ ಸಮುದಾಯದ ಸುಮಾರು 33 ಕುಟುಂಬಗಳಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ 2018ರಿಂದ ಬಾಕಿಯಾಗಿದೆ. ಈ ಬಗ್ಗೆ 2022ರಿಂದ ಸಮಿತಿ ನೇತೃತ್ವದಲ್ಲಿ ಪದೇ ಪದೇ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಇಲಾಖೆಗಳಿಗೆ, ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಗಡಿ ಗುರುತು ಮಾಡಿ, ನಿವೇಶನ ಹಂಚಿಕೆ ಮತ್ತು ಹಕ್ಕುಪತ್ರ ಹಸ್ತಾಂತರಕ್ಕೆ ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಯಾವುದೇ ಸೂಕ್ತ ಕಾರಣವಿಲ್ಲದೆ ಜಮೀನಿನ ಹಕ್ಕು ಪತ್ರ ಹಂಚಿಕೆ ಪ್ರಕ್ರಿಯೆಯನ್ನು ವರ್ಷಾನುಗಟ್ಟಲೆ ತಡೆ ಹಿಡಿಯಲು ಕಾರಣ ಏನು ಎಂದು ಅವರು ಪ್ರಶ್ನಿಸಿದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ವಾಸುದೇವ ಉಚ್ಚಿಲ್, ಜೆ. ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಜಯಂತಿ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ಪ್ರೊ. ಎಲ್. ನರೇಂದ್ರ ನಾಯಕ್, ಶೇಖರ್ ವಾಮಂಜೂರು, ಪ್ರಮುಖರಾದ ವಿಘ್ನೇಶ್ ವಾಮಂಜೂರು, ಪೂರ್ಣಿಮಾ ಮತ್ತು ಸುನಿ ಮೊದಲಾದವರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article