ಜಯದೇವ್ ಕಿದ್ವಾಯಿ ನಿಮಾನ್ಸ್ ಘಟಕ ಸ್ಥಾಪನೆಗಾಗಿ ಹಕ್ಕೊತ್ತಾಯ: ಪುತ್ತೂರಿನ ಜನತೆಗೆ ಮತ್ತಷ್ಟು ಆರೋಗ್ಯಕ್ಕಾಗಿ 1 ಲಕ್ಷ ಸಹಿಸಂಗ್ರಹ
ಪುತ್ತೂರಿನ ಮೆಡಿಕಲ್ ಕಾಲೇಜಿನ ಪಕ್ಕದಲ್ಲಿ ನಿಮಾನ್ಸ್, ಜಯದೇವ ಹಾಗೂ ಕಿದ್ವಾಯಿ ಸಂಸ್ಥೆಗಳ ಪ್ರಾದೇಶಿಕ ಘಟಕಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ವತಿಯಿಂದ ಸೋಮವಾರ ಪುತ್ತೂರಿನ ಮಂಜಲ್ಪಡ್ಪು ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಅವರು ಮುಂದಿನ ಹೋರಾಟದ ವಿಚಾರಗಳನ್ನು ಮಂಡಿಸಿ ಮಾತನಾಡಿದರು.
ಪುತ್ತೂರಿನ ಸೇಡಿಯಾಪುನಲ್ಲಿ ಮೆಡಿಕಲ್ ಕಾಲೇಜು ಪಕ್ಕದಲ್ಲೇ ನಿಮಾನ್ಸ್, ಜಯದೇವ ಹಾಗೂ ಕಿದ್ವಾಯಿ ಸಂಸ್ಥೆಗಳ ಪ್ರಾದೇಶಿಕ ಘಟಕಗಳು ಆರಂಭಗೊಂಡಾಗ ಬಹು ವಿಶೇಷ ತಜ್ಞರ ಸಮನ್ವಯದ ಚಿಕಿತ್ಸೆ ಒಂದೇ ಕಡೆ ಲಭ್ಯವಾಗಿ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈಗಾಗಲೇ ಸಹಿ ಸಂಗ್ರಹ ಅಭಿಯಾನ ಆರಂಭಗೊಂಡು 20 ಸಾವಿರದಷ್ಟು ಸಹಿ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಿಗೆ ತೆರಳಿ ವಿದ್ಯಾಸಂಸ್ಥೆಗಳು, ಕ್ಲಬ್ ಗಳು, ಸಂಘಟನೆಗಳನ್ನು ಸಂಪರ್ಕಿಸಿ ಸಹಿ ಸಂಗ್ರಹ ಕಾರ್ಯ ಮಾಡಲಿದ್ದೇವೆ. ಗುರಿ ತಲುಪಿದ ಬಳಿಕ ರಾಜ್ಯದ ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು, ಶಾಸಕರುಗಳಿಗೆ ನೀಡಿ ನಮ್ಮ ಹಕ್ಕೊತ್ತಾಯವನ್ನು ಮಾಡಲಿದ್ದೇವೆ ಎಂದು ಹೇಳಿದರು.
ಪುತ್ತೂರಿನಲ್ಲಿ ಅನುಷ್ಠಾನಗೊಳ್ಳಲಿರುವ ಮೆಡಿಕಲ್ ಕಾಲೇಜು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯ ಮತ್ತು ನಿರ್ವಹಣೆಯಲ್ಲೇ ಉಳಿಯಬೇಕು. ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಗೆ ಅವಕಾಶ ನೀಡಬಾರದು. ಗುಣಮಟ್ಟದ ಶಿಕ್ಷಣ, ರೋಗಿಗಳ ಆರೈಕೆಗೆ ಅಗತ್ಯ ಸೌಲಭ್ಯಗಳು, ಸಿಬಂದಿಯನ್ನು ಒದಗಿಸಿ ರಾಜ್ಯದ ಅತ್ಯುತ್ತಮ ಸರಕಾರಿ ವೈದ್ಯಕೀಯ ಕಾಲೇಜನ್ನಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.
ಹೋರಾಟ ಸಮಿತಿಯ ಸಂಚಾಲಕ ಅಮಳ ರಾಮಚಂದ್ರ ಪ್ರಸ್ತಾವನೆಗೈದು, ಒಂದು ಯಶಸ್ವಿ ಹೋರಾಟದ ಅಂತ್ಯದಲ್ಲಿ ಮತ್ತೊಂದು ಯಶಸ್ವಿ ಹೋರಾಟದ ಆರಂಭದಲ್ಲಿ ನಿಂತಿದ್ದೇವೆ. 2013ರಲ್ಲಿ ಆರಂಭಗೊಂಡ ಮೆಡಿಕಲ್ ಕಾಲೇಜು ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸಿದ್ದವು. 2016ರ ಸಂದರ್ಭದಲ್ಲಿ ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದಾಗ ಮೆಡಿಕಲ್ ಕಾಲೇಜಿಗೆ ಜಾಗ ಮಂಜೂರಾಗಿದ್ದು, 2020ರಲ್ಲಿ ನಾವು ಹೋರಾಟ ಸಮಿತಿಯನ್ನು ಆರಂಭಿಸಿದ್ದೆವು. ಈಗಿನ ಶಾಸಕ ಅಶೋಕ್ ರೈಯವರ ಒತ್ತಡ, ಪ್ರಯತ್ನದಿಂದ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾಗಿದೆ ಎಂದರು.
ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ, ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಉಪಾಧ್ಯಕ್ಷ ವಿಶ್ವಪ್ರಸಾದ್ ವೇದಿಕೆಯಲ್ಲಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ ವಂದಿಸಿದರು.