ಬಾಗಿಲು ತೆರೆದ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾ ದೇವಾಲಯ
Monday, October 19, 2026
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿರುವ ಪವಿತ್ರ ಗುಹೆಯು, ಶ್ರೀ ಸೋಮನಾಥೇಶ್ವರ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಭಕ್ತರಿಗಾಗಿ ಇದೀಗ ತೆರೆದಿದೆ.
ಗುಹಾ ಪ್ರವೇಶ ಮತ್ತು ತೀರ್ಥಸ್ನಾನದ ಉದ್ಘಾಟನಾ ಸಮಾರಂಭವು ತುಲಾ ಸಂಕ್ರಮಣದ ಶುಭ ಸಂದರ್ಭದಲ್ಲಿ ಅ.17 ರಂದು ಬೆಳಗ್ಗೆ 9 ಗಂಟೆಗೆ ನಡೆಯಿತು. ಈ ಕಾರ್ಯಕ್ರಮವು ಪ್ರಾಚೀನ ಹಾಗೂ ಆಧ್ಯಾತ್ಮಿಕವಾಗಿ ಪೂಜನೀಯವಾದ ಈ ಗುಹಾ ದೇವಾಲಯದ ಇತಿಹಾಸದಲ್ಲಿ ಮಹತ್ವದ ಸಂದರ್ಭವಾಗಿದೆ.
ಈ ಸಂದರ್ಭದಲ್ಲಿ ಮಂಗಳೂರಿನ ಗುರುಪುರದ ಶ್ರೀ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ತಮ್ಮ ಅಮೃತಹಸ್ತದಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಕ್ತರಿಗೆ ಆಶೀರ್ವಚನ ನೀಡಿದರು.
ಲಕ್ಷ್ಮೀನಾರಾಯಣ ಆಸ್ರಣ್ಣ ಕಟೀಲು, ಶಶಿಧರ ಶೆಟ್ಟಿ ಬರೋಡಾ, ದಯಾನಂದ ಶೆಟ್ಟಿ, ಸೂರತ್, ದೇವೇಂದ್ರ ಹೆಗ್ಡೆ ಕೊಕ್ರಾಡಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.