ಡಾ. ಮೋಹನ ಆಳ್ವ ಅವರಿಗೆ ‘ಶ್ರೀ ಶಾರದ ತಿಲಕ ಪ್ರಶಸ್ತಿ’ ಪ್ರದಾನ

ಡಾ. ಮೋಹನ ಆಳ್ವ ಅವರಿಗೆ ‘ಶ್ರೀ ಶಾರದ ತಿಲಕ ಪ್ರಶಸ್ತಿ’ ಪ್ರದಾನ


ಬಂಟ್ವಾಳ: ತಾಲೂಕಿನ ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಶ್ರೀ ಶಾರದೋತ್ಸವದ ದಶಮಾನೋತ್ಸವ ‘ದಶಾರದ ಸಂಭ್ರಮ-2026’ದ ಮೊದಲ ದಿನ ಭಾನುವಾರ ಸಂಜೆ ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರಿಗೆ ‘ಶ್ರೀ ಶಾರದ ತಿಲಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ದೇಶಕ್ಕೆ ಪುರಾತನವಾದ ಸಂಸ್ಕೃತಿಯನ್ನು ಹೊಂದಿದೆ. ಧಾರ್ಮಿಕ ಚಿಂತನೆ ನಮ್ಮ ಬದುಕಿನಲ್ಲಿ ಸೇರಿಕೊಂಡಿದೆ. ಧಾರ್ಮಿಕತೆ,ಸಾಂಸ್ಕೃತಿಕೆ ದೇಶದ ಸಂಪತ್ತಾಗಿದೆ ಎಂದರು.

ಸಮಾಜಕ್ಕೆ ಸುಂದರವಾದ ಸಂದೇಶವನ್ನು ನೀಡುತ್ತಿರುವ ಧಾರ್ಮಿಕ ಪ್ರಜ್ಞೆ, ಸಾಂಕೃತಿಕ ವಿಚಾರಗಳು ಪ್ರತಿ ಹಳ್ಳಿಯಲ್ಲಿ ಗಟ್ಟಿಯಾಗಿ ಬೇರೂರುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು ಎಂದು ಹೇಳಿದ ಅವರು ಮಕ್ಕಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕತೆಯನ್ನು ಅರ್ಥೈಸಿಕೊಂಡು ಸೌಂದರ್ಯ ಪ್ರಜ್ಞೆ ಬೆಳಸಿಕೊಳ್ಳಬೇಕು ಎಂದರು.

ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ‘ದಶಾರದ’ ಸ್ಮರಣ ಸಂಚಿಕೆಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಿ ಆರ್ಶೀವಚನಗೈದು, ಶಿಕ್ಷಣದ ಜತೆಗೆ ಸಂಸ್ಕೃತಿಯ ಪೋಷಣೆ ಮಾಡುವುದರ ಕಲೆ,ಸಾಹಿತ್ಯದಂತ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಡಾ. ಮೋಹನ್ ಆಳ್ವ ಅವರಂತ ಆರ್ಹ ವ್ಯಕ್ತಿಗೆ ಸಂದಿದೆ ಎಂದರು.

ಸರಕಾರ ತುಳು ರಾಜ್ಯದ ಎರಡನೇ ಭಾಷೆಯನ್ನಾಗಿ ಘೋಷಿಸುವಲ್ಲಿ ಡಾ.ಆಳ್ವ ಸಲ್ಲಿಸಿರುವ ವರದಿಯು ಪ್ರಮುಖ ಪಾತ್ರ ವಹಿಸಿದೆ ಎಂದ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಕೆಲಸ ಆಗಬೇಕು, ಧರ್ಮಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ನುಡಿದರು.

ಸರಕಾರಿ ಶಾಲೆಗಳು ಮುಚ್ಚುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಶ್ರೀ ಶಾರದ ಸೇವಾ ಟ್ರಸ್ಟ್ ಮೂಡುಪಡುಕೋಡಿ ಶಾಲೆಯನ್ನು ದತ್ತುಪಡೆದು ಅಭಿವೃದ್ಧಿಪಡಿಸುತ್ತಿರುವ ಕಾರ್ಯ ಅಭಿನಂದನೀಯವಾಗಿದೆ ಎಂದರು.

ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕ ಶ್ರೀಪತಿ ಭಟ್ ಮೂಡಬಿದ್ರೆ ಅವರು ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಪಿಲಾತಬೆಟ್ಟು ಪ್ರಾ.ಕೃ.ಪ.ಸೇ.ಸ. ಸಂಘದ ಅಧ್ಯಕ್ಷ ಎಂ. ತುಂಗಪ್ಪ ಬಂಗೇರ, ಬಲವಂಡಿ ಕ್ಷೇತ್ರದ ಗಡಿಪ್ರದಾನರಾದ ದುರ್ಗಾ ಪ್ರಸಾದ್ ಶೆಟ್ಟಿ ಮಾವಂತೂರು, ಬಳ್ಳಮಂಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಹರ್ಷ ಸಂಪಿಗೆತ್ತಾಯ, ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾಲಿನಿ ಯತೀಶ್ ಪೂಜಾರಿ, ನೋಟರಿ ಹಾಗೂ ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಉದ್ಯಮಿ ವರದರಾಜ ಪೈ ಮಾವಿನಕಟ್ಟೆ ಅವರು ಅತಿಥಿಗಳಾಗಿ ಭಾಗವಹಿಸಿದರು.

ಇದೇ ವೇಳೆ ಸಾಧಕಿ,ಬಹುಮುಖ ಪ್ರತಿಭೆ ವಿಷ್ಣುಪ್ರಿಯ ಪೈ ಮಾವಿನಕಟ್ಟೆ ‘ದಶಾರದ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸ್ಮರಣಸಂಚಿಕೆಯ ಕುರಿತಾಗಿ ಸಂಪಾದಕ ಗೋಪಾಲ ಅಂಚನ್ ಅವರು ಮಾಹಿತಿ ನೀಡಿದರು. ಸುಪ್ರೀತ್ ಆಳ್ವ ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಪತ್ರವನ್ನು ಗಣೇಶ್ ಅವರು ವಾಚಿಸಿದರು.

ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುದೀಂದ್ರ ಶೆಟ್ಟಿ ಎರ್ಮೆನಾಡು, ಶ್ರೀ ಶಾರದೋತ್ಸವ ಸೇವಾ ಸಮಿತಿ ಕಾರ್ಯದರ್ಶಿ ಚಂದ್ರಹಾಸ ನಾಯ್ಕ್ ಎರ್ಮೆನಾಡು, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಬನತ್ತಕೋಡಿ, ಸಂಚಾಲಕ ಶಂಕರಶೆಟ್ಟಿ ಬೆದ್ರಮಾರ್, ಶ್ರೀ ಶಾರದ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಹರೀಂದ್ರ ಪೈ,ನಿರ್ದೇಶಕರಾದ ಮೋಹನ್ ಶೆಟ್ಟಿ ನರ್ವಲ್ದಡ್ಡ, ಶೇಖರ ಕರ್ಕೇರಾ ಕಯ್ಯಾಬೆ ಮತ್ತಿತರರು ಇದ್ದರು.

ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್. ಪ್ರಸ್ತಾವಿಸಿ, ಸ್ವಾಗತಿಸಿದರು. ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ದಯಾನಂದ ಎಸ್. ಎರ್ಮೆನಾಡು ವಂದಿಸಿದರು. ರಂಗಕಲಾವಿದ ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಅಗಮಿಸಿ ದೇವರದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಶ್ರೀಶಾರದ ಪ್ರತಿಷ್ಠೆ:

ಬೆಳಗ್ಗೆ ಶ್ರೀಶಾರದಾ ದೇವಿಯ ಪ್ರತಿಷ್ಠೆ, ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಭಕ್ತಿ ರಸಮಂಜರಿ, ಅನ್ನಸಂತರ್ಪಣೆ, ತೆಲಿಕೆದ ಗೊಂಚಿಲ್ ಹಾಸ್ಯ ಕಾರ್ಯಕ್ರಮ, ನೃತ್ಯ ವೈಭವ, ಭರತನಾಟ್ಯ, ನಾಟಕ ಪ್ರದರ್ಶನ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article