ಮಾದರಿಯಾದ ಪುಟಾಣಿಗಳು: ವೇಷ ಧರಿಸಿ ಬಂದ ಹಣ ಬಡ ರೋಗಿಗಳಿಗೆ
ಬಾಡಿಗೆ ವೇಷ ಧರಿಸುವ ಬದಲು ಗೋಣಿ ಚೀಲ ಹಾಗೂ ಡಬ್ಬಿಗಳಿಂದ ತಾವೇ ಸ್ವತಃ ಹುಲಿವೇಷ ತಯಾರಿಸಿ ಕುಣಿದು, ಆ ಮೂಲಕ ಬಂದ ಹಣವನ್ನು ಐದು ವರ್ಷಗಳಿಂದ ಹಾಸಿಗೆ ಹಿಡಿದಿರುವ ಬಡ ರೋಗಿಗೆ ನೀಡಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಜಿಪ ಗುತ್ತು ಪಡು ಪ್ರಾಥಮಿಕ ಶಾಲೆಯ ವೈಭವ್, ಹಾರ್ದಿಕ್, ಅದೀಪ್, ಶ್ರೇಯಸ್, ಸಾತ್ವಿಕ್, ಅಮೋಗ್ ಹಾಗೂ ರಿತೇಶ್ ಈ ಕರುಣಾಮಯಿ ಕಾರ್ಯ ಮಾಡಿದ ಅಪರೂಪದ ಬಾಲ್ಯದ ರಾಯಭಾರಿಗಳು.
ದಸರಾ ಸಂದರ್ಭದಲ್ಲಿ ಮಂಗಳೂರಿನಲ್ಲಿ ಶಾರ್ದೂಲ ವೇಷ (ಹುಲಿವೇಷ) ಧರಿಸಿ ಕುಣಿಯುವುದು ಈ ಮಕ್ಕಳ ಆಸೆಯಾಗಿತ್ತು. ಆದರೆ, ಅದಕ್ಕಾಗಿ ಹಣ ಖರ್ಚು ಮಾಡಿ ಬಾಡಿಗೆ ವೇಷ ತರಲು ಇಷ್ಟಪಡದ ಈ ಕ್ರಿಯಾಶೀಲ ಮಕ್ಕಳು, ತಮ್ಮ ಮನೆಯಲ್ಲಿದ್ದ ಗೋಣಿ ಚೀಲ, ಖಾಲಿ ಡಬ್ಬಿ ಹಾಗೂ ಆಟದ ಸಾಮಗ್ರಿಗಳನ್ನೇ ಬಳಸಿ ತಾವೇ ಸ್ವತಃ ಅತ್ಯಂತ ಆಕರ್ಷಕವಾಗಿ ಹುಲಿವೇಷದ ಉಡುಪು ಸಿದ್ಧಪಡಿಸಿಕೊಂಡಿದ್ದರು.
ಊರಿನಲ್ಲಿ ಹುಲಿವೇಷ ಕುಣಿದು ಬಂದ ಬಳಿಕ ಮಕ್ಕಳಿಗೆ ನಿರೀಕ್ಷೆಗೂ ಮೀರಿ ಹಣ ಸಂಗ್ರಹವಾಗಿತ್ತು. ಹಿಂದಿನ ವರ್ಷಗಳಲ್ಲಿ ಈ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಳ್ಳುತ್ತಿದ್ದ ಮಕ್ಕಳು, ಈ ಬಾರಿ ವಿಭಿನ್ನವಾಗಿ ಯೋಚಿಸಿದರು. ಊರಿನಲ್ಲೇ ಕಳೆದ ಐದು ವರ್ಷಗಳಿಂದ ರಸ್ತೆ ಅಪಘಾತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ಬಡ ವ್ಯಕ್ತಿಯೊಬ್ಬರ ಕಷ್ಟವನ್ನು ಅರಿತಿದ್ದ ಈ ಪುಟಾಣಿಗಳು, ಸಂಗ್ರಹವಾದ ಸಂಪೂರ್ಣ ಹಣವನ್ನು ಅವರ ಚಿಕಿತ್ಸಾ ನೆರವಿಗೆ ನೀಡಲು ನಿರ್ಧರಿಸಿದರು.
ವ್ಯಾಪಕ ಮೆಚ್ಚುಗೆ..
ಯಾರಿಗೂ ತಿಳಿಸದೆ ನೇರವಾಗಿ ಆ ರೋಗಿಯ ಬಳಿಗೆ ತೆರಳಿದ ಮಕ್ಕಳು, ತಾವು ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಮಕ್ಕಳ ಈ ಸಮಾಜಮುಖಿ ಕಾರ್ಯ ಯಾರಿಗೂ ಮೊದಲೇ ತಿಳಿದಿರಲಿಲ್ಲ. ಆದರೆ, ಮಕ್ಕಳು ಹಣ ಹಸ್ತಾಂತರಿಸಿದ ಸುಂದರ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಊರಿನ ಜನ ಹಾಗೂ ಸ್ವತಃ ಇವರ ಹೆತ್ತವರು ಆಶ್ಚರ್ಯಚಕಿತರಾದರು.
ಚಿಕ್ಕ ವಯಸ್ಸಿನಲ್ಲೇ ಈ ಮಕ್ಕಳು ತೋರಿದ ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಕಂಡು ಪೋಷಕರು ಮತ್ತು ಗ್ರಾಮಸ್ಥರು ಅತ್ಯಂತ ಹರ್ಷ ವ್ಯಕ್ತಪಡಿಸಿದ್ದು, ಪುಟಾಣಿಗಳ ಈ ಸಾಹಸಕ್ಕೆ ಕರಾವಳಿ ಭಾಗದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.