ಹಿರಿಯ ಹುಲಿ ವೇಷಧಾರಿ ‘ಪಿಲಿ ಅಣ್ಣು’ ಅವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ ಪ್ರದಾನ
ಮಂಗಳೂರಿನ ಮಣ್ಣಗುಡ್ಡೆಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಚಾವಡಿ ತಮ್ಮನದ ಗೌರವ ಸಮರ್ಪಣೆ ನಡೆಯಿತು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ಚಾವಡಿ ತಮ್ಮನ ನೆರವೇರಿಸಿ ಮಾತನಾಡಿ, ತುಳು ಭಾಷೆಯನ್ನು ರಾಜ್ಯದ ಎರಡನೇ ಆಡಳಿತ ಭಾಷೆಯನ್ನಾಗಿ ಘೋಷಣೆ ಮಾಡಿರುವ ಸಂದರ್ಭದಲ್ಲಿ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳಿಗೆ ಈಗ ಮತ್ತಷ್ಟು ಹೆಚ್ಚಿನ ಸ್ಥಾನಮಾನ ಸಿಕ್ಕಿದಂತಾಗಿದೆ. ಹಿರಿಯ ಹುಲಿವೇಷಧಾರಿ ಪಿಲಿ ಅಣ್ಣು ಅವರನ್ನು ಸನ್ಮಾನಿಸುವ ಮೂಲಕ ತುಳುನಾಡಿನ ಸಾಂಪ್ರದಾಯಿಕ ಕಲೆಗೆ ತುಳು ಅಕಾಡೆಮಿ ನಿಜವಾದ ಗೌರವವನ್ನು ಸಲ್ಲಿಸಿದೆ ಎಂದು ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಅಪೂರ್ವ ಜಾನಪದ ಕಲೆಯನ್ನು ಬೆಳೆಸಿದ ಪಿಲಿ ಅಣ್ಣು ಅವರಂಥ ಹಿರಿಯ ಹುಲಿ ಹುಲಿವೇಷಧಾರಿಗಳ ಕೊಡುಗೆ ಅನನ್ಯ ಎಂದರು.
ಪಿಲಿ ಅಣ್ಣು ಅವರು ತಮ್ಮ ಹುಲಿವೇಷದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಣ್ಣಗುಡ್ಡೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಶುಭಕೋರಿ ಮಾತನಾಡಿದರು.
ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ ಬರ್ಕೆ, ಬಳ್ಳಾಲ್ ಭಾಗ್ ಫ್ರೆಂಡ್ಸ್ ಅಧ್ಯಕ್ಷ ರಕ್ಷಿತ್ ಕೊಟ್ಟಾರಿ, ಶಾಲೆಯ ಮುಖ್ಯೋಪಾಧ್ಯಾಯಿನಿ ನಳಿನಿ ಪಿ. ಶೆಟ್ಟಿ, ಉರ್ವಾ ಕೊರಗತನಿಯ ಕ್ಷೇತ್ರದ ಅಧ್ಯಕ್ಷ ರಾಜೇಶ್ ಉರ್ವಾ ಉಪಸ್ಥಿತರಿದ್ದರು.
ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಅದ್ಯಪಾಡಿ ಸನ್ಮಾನ ಪತ್ರ ವಾಚಿಸಿದರು. ಗಣೇಶ್ ಕುಮಾರ್ ವಂದಿಸಿದರು.