ಸಿಪಿಐಎಂನಿಂದ ಸರ್ಕಾರಿ ಆಸ್ಪತ್ರೆಗೆ ಆಗ್ರಹಿಸಿ ಪ್ರತಿಭಟನೆ
ಈ ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು, ದಕ್ಷಿಣ ಕನ್ನಡ ಜಿಲ್ಲೆಯು ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಮೆಡಿಕಲ್ ಕಾಲೇಜಿನ ಕಾಶಿಯಾಗಿದೆ. ಬಡಜನರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ತಮ್ಮ ಮನೆಮಠ ಮಾರಾಟ ಮಾಡಬೇಕಾದಂತಹ ಸ್ಥಿತಿ ಇದೆ. ಒಮ್ಮೆ ಈ ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಒಳರೋಗಿಯಾಗಿ ದಾಖಲಾದರೆ ಲಕ್ಷ ಲಕ್ಷ ಬಿಲ್ ಮಾಡುತ್ತಾರೆ, ಈ ಬಿಲ್ಲನ್ನು ಕಟ್ಟಲು ಸಾಧ್ಯವಾಗದೆ ಬಡಜನರು ಸಾಮಾಜಿಕ ಜಾಲತಾಣದಲ್ಲಿ ಹಣ ಬೇಡುವ ಪರಿಸ್ಥಿತಿ ಇದೆ ಎಂದು ಹೇಳಿದರು.
ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಕೂಡಾ ಆಗಿಲ್ಲ, ಬಡ ತಂದೆ ತಾಯಿಗಳ ಮಕ್ಕಳು ವೈದ್ಯರಾಗುವ ಕನಸು ನನಸಾಗಿಯೇ ಉಳಿದಿದೆ. ಉಳ್ಳಾಲ ಕ್ಷೇತ್ರದಿಂದ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತ ಬಂದಿರುವ ಮತ್ತು ಎರಡು ಬಾರಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹನೆ ಮಾಡುತ್ತಿರುವ ಯು.ಟಿ. ಖಾದರ್ ಅವರು ಉಳ್ಳಾಲ ತಾಲೂಕಿಗೆ ತಾಲೂಕು ಆಸ್ಪತ್ರೆಯನ್ನೇ ನಿರ್ಮಿಸಿಲ್ಲ ಇರುವ ಸರಕಾರಿ ಪ್ರಾಥಮಿಕ, ಸಮುದಾಯ ಆಸ್ಪತ್ರೆಗಳನ್ನೇ ಖಾಸಗಿ ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾದ ಬಿಜೆಪಿ ಶಾಸಕರು ಕಂಬಳ, ಡಿಜೆಯ ಹಿಂದೆ ಬಿದ್ದಿದ್ದಾರೆ. ಜನಸಾಮನ್ಯರ ಗೋಳು ಕೇಳುವವರಿಲ್ಲ ಎಂದು ಕಿಡಿ ಕಾರಿದ ಅವರು ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಹಗಲು ರಾತ್ರಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ತೊಕ್ಕೊಟ್ಟು, ಸುನೀಲ್ ಕುಮಾರ್ ಬಜಾಲ್, ರೈತ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಮಹಿಳಾ ಮುಖಂಡರಾದ ಪದ್ಮಾವತಿ ಶೆಟ್ಟಿ, ಆಟೋ ರಾಜಕನ್ಮಾರ್ ರಿಕ್ಷಾ ಯೂನಿಯನ್ ಅಧ್ಯಕ್ಷ ಜಲೀಲ್ ಕೊಡಕ್ಕಲ್ ಮಾತನಾಡಿದರು.
ಧರಣಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅಬೂಬಕರ್ ಜಲ್ಲಿ, ಖಾದರ್ ಸಣ್ಣಬೈಲ್, ಇಸ್ಮಾಯಿಲ್ ಕಣಂತೂರು, ಕಾರ್ಮಿಕ ಮುಖಂಡರಾದ ಜಯಂತ್ ನಾಯ್ಕ್, ಸುಂದರ ಕುಂಪಲ, ವಿಲಾಸಿನಿ ತೊಕ್ಕೊಟ್ಟು, ಪ್ರಮೋದಿನಿ ಕಲ್ಲಾಪು, ಇಬ್ರಾಹಿಂ ಮದಕ, ಶೇಖರ್ ಕುಂದರ್,ರಮೇಶ್ ಉಳ್ಳಾಲ, ರಝಕ್ ಮುಡಿಪು, ಅಲಿ ಕಾಯಾರ್, ಶಾಫಿ ಮುಡಿಪು, ಫಾರೂಕ್ ಕೊಣಾಜೆ, ಇಕ್ಬಾಲ್ ಹರೇಕಳ, ಸಿದ್ದಿಕ್ ಪಂಜಿಮಾಡಿ, ಸಿರಾಜ್ ಮೊಂಟೆಪದವ್ ಮತ್ತಿತರರು ಉಪಸ್ಥಿತರಿದ್ದರು.
ಸಿಪಿಐಎಂ ಮುಡಿಪು ವಲಯ ಸಮಿತಿ ಸದಸ್ಯ ರಝಾಕ್ ಮೊಂಟೆಪದವು ಕಾರ್ಯಕ್ರಮ ನಿರೂಪಿಸಿ, ಸಿಪಿಐಎಂ ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ ವಂದಿಸಿದರು.