ಜಿಲ್ಲಾ ಗಮಕ ಸಮ್ಮೇಳನದಲ್ಲಿ ಗಮನ ಸೆಳೆದ ಚಿತ್ರ ಗಮಕ ವೈವಿಧ್ಯ
Monday, October 26, 2026
ಉಜಿರೆ: ಉಜಿರೆಯ ಎಸ್‌ಡಿಎಂ ಸೆಕೆಂಡರಿ ಶಾಲೆಯ ಕೀರ್ತಿಶೇಷ ಮಂಜಯ್ಯ ಹೆಗ್ಗಡೆ ಸಭಾಂಗಣದ ವಿಜಯ ರಾಘವ ವೇದಿಕೆಯಲ್ಲಿ ಗಮಕ ಕಲಾ ಪರಿಷತ್ ವತಿಯಿಂದ ನಡೆದ ಜಿಲ್ಲಾ 12ನೇ ಗಮಕ ಸಮ್ಮೇಳನದಲ್ಲಿ ಚಿತ್ರ ಗಮಕ ವೈವಿಧ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ರಾಘವಾಂಕ ಕವಿಯ ವಿಶ್ವೇಶ್ವರ ಸಾಕ್ಷಾತ್ಕಾರ ಕಾವ್ಯ ಭಾಗವನ್ನು ಹಾಸನ ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಕಲಾಶ್ರೀ ಗಣೇಶ ಉಡುಪ ವಾಚಿಸಿ, ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ವ್ಯಾಖ್ಯಾನಿಸಿದರು.
ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ಕಾವ್ಯಕ್ಕೆ ಸಮನಾಗಿ ಕುಂಚದಲ್ಲಿ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದರು. ಉಪನ್ಯಾಸಕಿ ಸುವರ್ಣಕುಮಾರಿ ಕೆ.ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.