ಕೆಪಿಸಿಸಿ ಉಸ್ತುವಾರಿಗಳ ನೇಮಕ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಸಂಬಂಧಿಸಿದಂತೆ ಕೆಪಿಸಿಸಿ ವತಿಯಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಬೆಳ್ತಂಗಡಿ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರಗಳಿಗೆ ಬಿ.ಕೆ. ಹರಿಪ್ರಸಾದ್, ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಿಗೆ ಐವನ್ ಡಿ’ಸೋಜಾ, ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಪಿ.ವಿ. ಮೋಹನ್ ಅವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸಲಹೆ ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳ ಸಮಾಲೋಚನೆಯ ಮೇರೆಗೆ ಈ ನೇಮಕಾತಿ ಮಾಡಲಾಗಿದೆ.
ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳನ್ನು ಚುರುಕುಗೊಳಿಸುವುದು ಹಾಗೂ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದು ಉಸ್ತುವಾರಿಗಳ ಜವಾಬ್ದಾರಿಯಾಗಿದೆ ಹಾಗೂ ಕ್ಷೇತ್ರಗಳಲ್ಲಿ ಕೈಗೊಳ್ಳುವ ಸಂಘಟನಾ ಚಟುವಟಿಕೆಗಳು ಹಾಗೂ ಪಕ್ಷದ ಪ್ರಗತಿಯ ಕುರಿತು ಕಾಲಕಾಲಕ್ಕೆ ಕೆಪಿಸಿಸಿಗೆ ವರದಿ ಸಲ್ಲಿಸುವಂತೆ ಉಸ್ತುವಾರಿಗಳಿಗೆ ಸೂಚಿಸಲಾಗಿದೆ.