ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿಟ್ಲದಲ್ಲಿ 3 ಟಿಪಿಡಿ ಸಾಮರ್ಥ್ಯದ ಎಂಆರ್‌ಎಫ್ ಘಟಕಕ್ಕೆ ಚಾಲನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ 2.0 ಹಾಗೂ ಕೇಂದ್ರ ಪುರಸ್ಕೃತ ವಿವಿಧ ಯೋಜನೆಯಡಿ ಸುಮಾರು 60.10 ಲಕ್ಷ ರೂ.ಗಳ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಈ ಘನ ತ್ಯಾಜ್ಯ ಘಟಕದಲ್ಲಿ ಒಣತ್ಯಾಜ್ಯ ಸಂಗ್ರಹಿಸುವುದಕ್ಕೆ 3 ಟಿಪಿಡಿ ಸಾಮರ್ಥ್ಯದ ಮೆಟೀರಿಯಲ್ ರಿಕವರಿ ಫೆಸಿಲಿಟಿ ಘಟಕವನ್ನು ನಿರ್ಮಿಸಲಾಗುತ್ತದೆ. ಆ ಮೂಲಕ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಹಳ ವೈಜ್ಞಾನಿಕವಾದ ಒಣ ಕಸ ಸಂಗ್ರಹ ಹಾಗೂ ವಿಲೇವಾರಿ ವ್ಯವಸ್ಥೆ ಅಳವಡಿಕೆಯಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಮಿಷನ್ ಅನುಷ್ಠಾನ ಪ್ರಕ್ರಿಯೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.
ವಿಟ್ಲದ ಎಂಆರ್‌ಎಫ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಸಂಸದರು, ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಅಲ್ಲದೆ, ಒಣ ಕಸವನ್ನು ಈ ರೀತಿಯ ಅತ್ಯಾಧುನಿಕ ವ್ಯವಸ್ಥೆಯಡಿ ಸಂಗ್ರಹಿಸಿ ವಿಲೇವಾರಿ ಮಾಡುವುದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶವನ್ನು ಒದಗಿಸುವ ಜತೆಗೆ ಆರ್ಥಿಕವಾಗಿ ಸಂಪನ್ಮೂಲ ಕ್ರೋಢೀಕರಣಕ್ಕೂ ಅನುಕೂಲ ಕಲ್ಪಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ಕನಸು ನನಸಾಗಬೇಕಾದರೆ, ಗ್ರಾಮ ಮತ್ತು ಪಟ್ಟಣ ಮಟ್ಟದಲ್ಲೇ ಆಧುನಿಕ ಮೂಲಸೌಕರ್ಯಗಳು ಬೆಳೆಯಬೇಕು. ಈ 60.10 ಲಕ್ಷದ ಯೋಜನೆಯು ನಮ್ಮ ವಿಟ್ಲ ಪಟ್ಟಣ ಪಂಚಾಯತಿಯನ್ನು ಮಾದರಿ ಮತ್ತು ಸ್ವಾವಲಂಬಿ ಪಟ್ಟಣವನ್ನಾಗಿ ಪರಿವರ್ತಿಸಲು ನಾಂದಿ ಹಾಡಲಿದೆ ಎಂದರು.
ಈ ಕಾರ‍್ಯಕ್ರಮದ ಬಳಿಕ ಪ್ರಧಾನಮಂತ್ರಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಪ್ರಯುಕ್ತ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ವಿಟ್ಲ ಮಹಾಶಕ್ತಿ ಕೇಂದ್ರದ ಬೂತ್ ಸಂಖ್ಯೆ ೫ರ ಪಳಿಕೆಯಲ್ಲಿ ಸಂಸದ ಕ್ಯಾ.ಚೌಟ ಅವರು ಕಾರ್ಯಕರ್ಯರೊಂದಿಗೆ ಸಸಿ ನೆಟ್ಟು ನೀರುಣಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ಬಿಜೆಪಿ ಮುಖಂಡರಾದ ದೇವಪ್ಪ ಪೂಜಾರಿ, ಸಂಜಯ್ ಪ್ರಭು, ಪ್ರಸನ್ನ ದರ್ಬೆ, ನಿತೀಶ್ ಕುಮಾರ್ ಶಾಂತಿವನ, ಹರಿಪ್ರಸಾದ್ ಯಾದವ್, ವಿದ್ಯಾಧರ ಜೈನ್, ಶ್ರೀಕೃಷ್ಣ ವಿಟ್ಲ, ಪ್ರೀತಂ ಪೂಂಜಾ, ಉದಯ ಆಲಂಗಾರ್, ಹರೀಶ್ ಸಿ.ಎಚ್. ಉಪಸ್ಥಿತರಿದ್ದರು.