ಮನಸು ಮತ್ತು ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಸಾರ್ಥಕ ಜೀವನ ನಡೆಸಬೇಕು: ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ
Friday, October 2, 2026
ಧರ್ಮಸ್ಥಳದಲ್ಲಿ ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶ
ಉಜಿರೆ: ಮನುಷ್ಯಜನ್ಮ ಶ್ರೇಷ್ಠವಾಗಿದ್ದು ದುಶ್ಚಟಗಳಿಂದ ದೂರವಿದ್ದು, ಸತ್ಕಾರ್ಯಗಳನ್ನು ಮಾಡಿದರೆ ಜೀವನ ಪಾವನವಾಗುತ್ತದೆ. ಮನಸು ಮತ್ತು ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಸಾರ್ಥಕ ಜೀವನ ನಡೆಸಬೇಕು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.
ಋಷಿ-ಮುನಿಗಳು, ವೇದಗಳು, ಪುರಾಣಗಳು ಹಾಗೂ ಉಪನಿಷತ್ತುಗಳು ಸಾರ್ಥಕ ಜೀವನಕ್ಕೆ ಉಪಯುಕ್ತವಾದ ಸಾಕಷ್ಟು ಉಪದೇಶ ಮತ್ತು ಮಾರ್ಗದರ್ಶನ ನೀಡಿವೆ. ಇವುಗಳ ಸದುಪಯೋಗ ಪಡೆದು ಮಾನವಜನ್ಮ ಸಾರ್ಥಕಗೊಳಿಸಬೇಕು.
ಮದ್ಯಪಾನ ಸಮಾಜಕ್ಕೆ ದೊಡ್ಡ ಕಂಟಕವಾಗಿದೆ. ಕುಟುಂಬದ ಒಬ್ಬ ವ್ಯಕ್ತಿ ವ್ಯಸನಮುಕ್ತನಾದರೆ ಇಡೀ ಕುಟುಂಬ ಸುಧಾರಣೆ ಆಗುತ್ತದೆ. ತನ್ಮೂಲಕ ಸಮಾಜವು ಪ್ರಗತಿಯಾಗುತ್ತದೆ. ಹೆಗ್ಗಡೆಯವರು ರಾಜ್ಯದೆಲ್ಲೆಡೆ ನಡೆಸುವ ಮದ್ಯವರ್ಜನ ಶಿಬಿರಗಳಿಂದ ಅನೇಕ ಮಂದಿ ವ್ಯಸನಮುಕ್ತರಾಗಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ನವಜೀವನ ಸಾಧನಾ ಸಮಾವೇಶವನ್ನು ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ವ್ಯಸನಮುಕ್ತರಾದವರು ದೃಢಸಂಕಲ್ಪದಿಂದ ಸಾರ್ಥಕ ಜೀವನ ನಡೆಸಬೇಕು. ನುಡಿದಂತೆ ನಡೆದರೆ ಮಾತಿಗೆ ಬೆಲೆ ಬರುತ್ತದೆ. ಮಾತೇ ಮಾಣಿಕ್ಯವಾಗುತ್ತದೆ. ಜನಜಾಗೃತಿ ವೇದದಿಕೆಯ ಕಾರ್ಯಕರ್ತರು ಮತ್ತು ನವಜೀವನ ಸದಸ್ಯರು ನಿಷ್ಠೆಯಿಂದ ಮಾಡುವ ಕರ್ತವ್ಯ ಮತ್ತು ಬದ್ಧತೆಯಿಂದ ವೇದಿಕೆಯ ಚಟುವಟಿಕೆಗಳು ಯಶಸ್ವಿಯಾಗಿವೆ ಎಂದರು. ವ್ಯಸನಮುಕ್ತರಾದವರು ನಂದಾದೀಪದಂತೆ ಬೆಳಗಿ ಇತರರ ಬದುಕಿಗೂ ಮಾರ್ಗದರ್ಶನ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವ್ಯಸನ ಮುಕ್ತರಾದವರಿಂದ ಆರ್ಥಿಕ ಬಡತನ ಮತ್ತು ಹೃದಯದ ಬಡತನ ನಿರ್ಮೂಲನೆ ಆಗಿ ಆರ್ಥಿಕ ಸ್ವಾವಲಂಬನೆಯೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಇಂತಹ ಸುಧಾರಣಾ ಕಾರ್ಯಕ್ರಮಗಳು ವಿಶಿಷ್ಟವಾಗಿದ್ದು ಇದು ನಾವು ಗಾಂಧೀಜಿಯವರಿಗೆ ಅರ್ಪಿಸುವ ಕೊಡುಗೆಯಾಗಿದೆ ಎಂದರು.
ಮದ್ಯವ್ಯಸನ ಮುಕ್ತರ ಪರವಾಗಿ ಕೇಶವ ಚಾರ್ಮಾಡಿ ಮತ್ತು ಸುಕನ್ಯಾ ಅನಿಸಿಕೆ ವ್ಯಕ್ತಪಡಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಆಶಯ ಭಾಷಣ ಮಾಡಿದರು.
ಶಾಸಕ ಹರೀಶ್ ಪೂಂಜ, ಮಾಜಿ ಎಂ.ಎಲ್.ಸಿ. ಕೆ. ಪ್ರತಾಪಸಿಂಹ ನಾಯಕ್, ನಟರಾಜ ಬಾದಾಮಿ ಮತ್ತು ಮಂಗಳೂರಿನ ಪ್ರಕಾಶ್ ಕಾರಂತ್ ಶುಭಾಶಂಸನೆ ಮಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಧನ್ಯವಾದವಿತ್ತರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.






