ಗಾಂಧಿ ತತ್ವ-ಆಶಯ ಜೀವನಪ್ರೇರಣೆ: ಸ್ಟೆಲ್ಲಾ ವರ್ಗೀಸ್

ಗಾಂಧಿ ತತ್ವ-ಆಶಯ ಜೀವನಪ್ರೇರಣೆ: ಸ್ಟೆಲ್ಲಾ ವರ್ಗೀಸ್


ಪುತ್ತೂರು: ಅಹಿಂಸಾ ಪ್ರತಿಪಾದಕ ಮಹಾತ್ಮಾಗಾಂಧಿ ಅವರ ಅಹಿಂಸಾತ್ಮಕ ಹೋರಾಟ ಸಾಮಾಜಿಕ ಬದಲಾವಣೆಯ ಕೊಡುಗೆಯಾಗಿದೆ. ಸತ್ಯ ಮತ್ತು ಧರ್ಮದ ಮಾರ್ಗವನ್ನೇ ಬದುಕಿನಲ್ಲಿ ಅನುಸರಿಸಿದ ಅವರ ತತ್ವ ಮತ್ತು ಆಶಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಪುತ್ತೂರಿಗೆ ಭೇಟಿ ನೀಡಿದ ಗಾಂಧೀಜಿ ಅವರು ಅಸ್ಪೃಶ್ಯತೆ ನಿರ್ಮೂಲನೆ, ಸಾಮಾಜಿಕ ನ್ಯಾಯದ ಮೂಲಕ ಸೌಹಾರ್ದಯುತ ಪುತ್ತೂರಿಗೆ ಸ್ಚಚ್ಛ-ಶಾಂತಿಯ ಸಂದೇಶ ನೀಡಿದ್ದಾರೆ ಎಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.

ಅವರು ಶುಕ್ರವಾರ ಪುತ್ತೂರು ಬಸ್ಸು ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿಕಟ್ಟೆ ಸಮಿತಿ, ತುಳುಕೂಟ ಹಾಗೂ ತುಳು ಅಪ್ಪೆ ಕೂಟದ ಆಶ್ರಯದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಪುತ್ತೂರಿನ ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ ಉಪನ್ಯಾಸ ನೀಡಿ, ತಾನು ಬದಲಾಗಿ ಸಮಾಜದ ಬದಲಾವಣೆಗೂ ಕಾರಣಕರ್ತರಾದ ಮಹಾತ್ಮಾಗಾಂಧಿ ಅವರ ಹೆಸರೇ ಒಂದು ರೋಮಾಂಚಕ ಶಕ್ತಿ. ಅವರ ಜೀವನಾದರ್ಶ ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಆದರ್ಶವಾಗಿದೆ. ಗಾಂಧಿ ಜೀವಂತ ಶಕ್ತಿಯಾಗಿದ್ದು, ನಿತ್ಯವೂ ನಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಪುತ್ತೂರಿನ ಗಾಂಧಿ ಕಟ್ಟೆಯ ಪವಿತ್ರ ಜಾಗದಲ್ಲಿ ನಮಗೆ ಧನಾತ್ಮಕ ಎನರ್ಜಿ ಸಿಗುತ್ತದೆ ಎಂದರು.

ಗಾಂಧಿಕಟ್ಟೆ ಸಮಿತಿಯ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧಿಕಟ್ಟೆಯ ಬಳಿ ಮುಂದಿನ ದಿನಗಳಲ್ಲಿ ಗಾಂಧಿ ಪೀಠ ಸ್ಥಾಪನೆ, ಗಾಂಧಿಪಥ, ಗಾಂಧಿ ಪ್ಲೈಓವರ್, ಗಾಂಧಿ ಜ್ಯೋತಿ, ವಸ್ತು ಸಂಗ್ರಹಾಲಯ, ಧ್ಯಾನ ಮಂದಿರ ರಚಿಸುವ ಯೋಜನೆಗಳಿವೆ. ಜತೆಗೆ ಪ್ರತಿವರ್ಷ ಸಾಧಕರಿಗೆ ಗಾಂಧಿ ಪ್ರಶಸ್ತಿ ನೀಡಲು ತೀರ್ಮಾನಿಸಿ ಮೊದಲ ಪ್ರಶಸ್ತಿಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಪ್ರದಾನ ಮಾಡಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್, ತಹಶೀಲ್ದಾರ್ ಎಸ್.ಬಿ.ಕೂಡಲಗಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರು ನಗರಸಭಾ ಪೌರಾಯುಕ್ತೆ ವಿದ್ಯಾ ಎಂ.ಕಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ, ರೋಟರಿ ಮಾಜಿ ಸಹಾಯಕ ಗವರ್ನರ್ ಎ.ಜೆ.ರೈ ಉಪಸ್ಥಿತರಿದ್ದರು.

ಗಾಂಧಿ ಜಯಂತಿ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತುಳು ಅಪ್ಪೆ ಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ.ಶೆಟ್ಟಿ ವಂದಿಸಿದರು. ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article