ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಬಿಜೆಪಿ ಖಂಡನೆ: ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿ, ಪರೀಕ್ಷೆಗಳನ್ನು ಮುಂದೂಡಲು ಆಗ್ರಹ
ಮಂಗಳೂರು: ನವರಾತ್ರಿ ಹಾಗೂ ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆಗಳನ್ನು ಆಯೋಜಿಸಿರುವುದನ್ನು ವಿರೋಧಿಸಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಎದುರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ನಡೆದ ದೌರ್ಜನ್ಯವನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.
ನವರಾತ್ರಿ ಹಿಂದೂಗಳಿಗೆ ಧಾರ್ಮಿಕವಾಗಿ ಹಾಗೂ ಭಾವನಾತ್ಮಕವಾಗಿ ಮಹತ್ವವುಳ್ಳ ಹಬ್ಬವಾಗಿದೆ. ದಸರಾ ನಮ್ಮ ನಾಡಹಬ್ಬವಾಗಿದ್ದು, ಮಂಗಳೂರು ದಸರಾಕ್ಕೆ ವಿಶೇಷ ಸ್ಥಾನಮಾನವಿದೆ. ಶಾಲಾ-ಕಾಲೇಜುಗಳಿಗೆ ಸರಕಾರವೇ ರಜೆ ಘೋಷಿಸಿರುವ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳನ್ನು ಹಬ್ಬದ ಆಚರಣೆ ಹಾಗೂ ಕುಟುಂಬದೊಂದಿಗಿನ ಸಂಭ್ರಮದಿಂದ ವಂಚಿತರನ್ನಾಗಿಸುವುದು ಅಕ್ಷಮ್ಯ ಎಂದು ಅವರು ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾಗೂ ಎಬಿವಿಪಿ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯ ಘಟನೆಯ ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅರುಣ್ ಜಿ. ಶೇಟ್ ಹೇಳಿದ್ದಾರೆ. ಈ ದೌರ್ಜನ್ಯಕ್ಕೆ ಕಾರಣರಾದವರ ವಿರುದ್ಧ ಎಫ್ಐಆರ್ ದಾಖಲಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿಸುತ್ತದೆ. ಮಧ್ಯಂತರ ರಜೆ ಹಾಗೂ ನವರಾತ್ರಿ-ದಸರಾ ಹಬ್ಬದ ಅವಧಿಯಲ್ಲಿ ನಿಗದಿಪಡಿಸಿರುವ ಪರೀಕ್ಷೆಗಳನ್ನು ಮುಂದೂಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆಯಾಗದಂತೆ ಪರಿ?ತ ವೇಳಾಪಟ್ಟಿ ಪ್ರಕಟಿಸಬೇಕು. ಕಾಲೇಜು ಆಡಳಿತ, ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾಡಳಿತ ತಕ್ಷಣ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕಾದ ಜಿಲ್ಲಾಡಳಿತ ಹಾಗೂ ಸರಕಾರ ವಿದ್ಯಾರ್ಥಿಗಳ ನ್ಯಾಯಸಮ್ಮತ, ಶಾಂತಿಯುತ ಕೋರಿಕೆಗೆ ಮನ್ನಣೆ ನೀಡಬೇಕು. ಅವರ ಅಹವಾಲುಗಳನ್ನು ಆಲಿಸುವ ಬದಲು ದೌರ್ಜನ್ಯದ ಮೂಲಕ ಹಕ್ಕುಗಳನ್ನು ಕಸಿಯುವ ಧೋರಣೆ ಖಂಡನೀಯ. ಇಂತಹ ದಮನಕಾರಿ ಧೋರಣೆಗೆ ಬಿಜೆಪಿಯ ಧಿಕ್ಕಾರವಿದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸುರಕ್ಷತೆಯ ಬಗ್ಗೆ ಬಿಜೆಪಿ ಕಾಳಜಿ ಹೊಂದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಯಾವುದೇ ವಿದ್ಯಾರ್ಥಿಯ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳಬಾರದು; ಪರೀಕ್ಷೆ ಬರೆಯುವ ಅವಕಾಶಕ್ಕೂ ಧಕ್ಕೆಯಾಗಬಾರದು. ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಬಿಜೆಪಿ ದೃಢವಾಗಿ ಬೆಂಬಲ ನೀಡಲಿದೆ ಎಂದು ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.