ವಿವಿ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆ
ಇದೇ ವೇಳೆ 2026-27ನೇ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಕಾರ್ಯಾಧ್ಯಕ್ಷರಾಗಿ ಜೀವನ್ ಪೂಜಾರಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಯಶ್ರೀ, ವಿಜಯ್ ಕುಮಾರ್, ಸುಗುಣ ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ವೀಣಾ, ಸದಸ್ಯರಾಗಿ ಜಯಲಕ್ಷ್ಮಿ, ಜಲಜಾಕ್ಷಿ, ಸ್ವಪ್ನ, ಬಿಪಾತುಮ, ಮಹೇಶ್ ಭಟ್ ಇವರುಗಳು ಆಯ್ಕೆಯಾದರು.
ನೂತನ ಕಾರ್ಯಾಧ್ಯಕ್ಷ ಜೀವನ್ ಪೂಜಾರಿ, ಸಮಾಜದಲ್ಲಿ ಬದುಕಲು ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಿತ್ಯದ ಬದುಕು ದುಸ್ತರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಿದೆ. ಅದೇ ರೀತಿ ವಿದ್ಯಾರ್ಥಿಗಳು ಉತ್ತಮ ಆಹಾರ ಕ್ರಮ ಹಾಗೂ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಿದೆ. ಅಲ್ಲದೇ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪೋಷಕರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಿದೆ. ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಪರಿಪಾಠ ಬೆಳೆಸಿಕೊಳ್ಳಬೇಕಿದೆ. ಆ ಮೂಲಕ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ಬದುಕಿನಲ್ಲಿ ಶಿಕ್ಷಣಕ್ಕಿಂತ ಮೌಲ್ಯಕ್ಕೆ ಹೆಚ್ಚಿನ ಪ್ರಾಶಸ್ತ್ರ ನೀಡಬೇಕು ಎಂಬುದು ಸತ್ಯವಾದ ಮಾತು. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡುವುದು ನಮ್ಮಗಳ ಆದ್ಯ ಕರ್ತವ್ಯವಾಗಿದೆ. ಅಂತೆಯೇ ಪೋಷಕರು ಕೂಡ ತಮ್ಮ ಮಕ್ಕಳ ನಡವಳಿಕೆ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ. ಇಂದು ಮಾದಕ ವಸ್ತುಗಳ ವ್ಯಸನಕ್ಕೆ ಗುರಿಯಾಗುತ್ತಿದ್ದು ಸಮಾಜಕ್ಕೆ ಮಾರಕವಾಗದಂತೆ ಅವರನ್ನು ಕಾಪಾಡುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಇದೇ ವೇಳೆ, ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಅವರನ್ನು ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ, ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
