ಪುಸ್ತಕಗಳಿಂದ ಮಹಾನ್ ನಾಯಕರ ಪರಿಚಯ ಸಾಧ್ಯ: ಪ್ರೊ. ಜಯವಂತ ನಾಯಕ್
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ರಾಜ್ಯಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಖಾತ್ರಿಕೋಶದ ಸಹಯೋಗದಲ್ಲಿ ನಡೆದ ಗ್ರಂಥಾವಲೋಕನ-2026 ಸರಣಿಯ ಎರಡನೇ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ದೈಹಿಕವಾಗಿ ಆಜಾನುಬಾಹು ಆಗಿರಲಿಲ್ಲ. ಬೊಚ್ಚು ಬಾಯಿ, ಬೋಳು ತಲೆ, ಗೂನು ಬೆನ್ನು, ನೋಡಲು ಫಕೀರನಂತೆ ಇದ್ದವರು ಗಾಂಧೀಜಿ. ಇವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬುದನ್ನು ಊಹೆ ಕೂಡ ಮಾಡಲು ಸಾಧ್ಯವಿಲ್ಲ. ಬಹುಶಃ ಈ ಸತ್ಯವನ್ನು ನಂಬಲು ಆಗುವುದಿಲ್ಲ. ಆದರೆ, ಇದೇ ವಾಸ್ತವ. ಇಂತಹ ಮಹಾನ್ ವ್ಯಕ್ತಿಯ ಬಗೆಗೆ ಪುಸ್ತಕಗಳನ್ನು ಓದುವುದರ ಮೂಲಕ ಅಥವಾ ಹಿರಿಯ ವ್ಯಕ್ತಿಗಳ ಮಾತು ಕೇಳಿ ತಿಳಿಯಬೇಕು. ಬದಲಾಗಿ, ಜನರ ತಪ್ಪು ಕಲ್ಪನೆಗಳನ್ನು ಆಧರಿಸಿ ಟೀಕೆ ಮಾಡುವುದು ಸರಿಯಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲಾ ಮಾಹಿತಿಗಳೂ ಸತ್ಯವಾಗಿರುವುದಿಲ್ಲ. ಅಲ್ಲಿ ಕೇವಲ ಒಂದು ಮುಖವನ್ನು ಮಾತ್ರವೇ ಕಾಣಲು ಸಾಧ್ಯ. ಇನ್ನೊಂದು ಮುಖದ ಪರಿಚಯ ಮಾಡಿಕೊಳ್ಳಲು ಪುಸ್ತಕಗಳು ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಹಿಂಸೆಯಿಂದ ಎಲ್ಲವನ್ನೂ ಸಾಧಿಸುವ ಕಲೆಯನ್ನು ಗಾಂಧೀಜಿ ಸಿದ್ಧಿಸಿಕೊಂಡಿದ್ದರು. ಗಾಂಧಿಯ ಮಾತು ಸತ್ಯಕ್ಕೆ ಹಿಡಿದ ಕನ್ನಡಿಯಂತಿತ್ತು. ಗಾಂಧಿ ಮತ್ತು ಅಂಬೇಡ್ಕರ್ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡ ಪ್ರಮುಖರು ಎಂದು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರಘು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕಿ ಡಾ. ವನಜಾ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರುಕ್ಮಯ್ಯ, ಐಕ್ಯುಎಸಿ ಸಂಯೋಜಕ ಡಾ. ಎಂ. ಎನ್. ಸಿದ್ದರಾಜು ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.