ಗಾಂಧೀಜೀಯವರ ಪ್ರಭಾವ ವಲಯದೊಳಗಿದ್ದ ಗೋವಿಂದ ಪೈಗಳು: ಗಾಂಧೀಜಿ ಮತ್ತು ಗೋವಿಂದ ಪೈ ಕುರಿತು ಪ್ರೊ.ರಾಜಾರಾಮ ತೋಳ್ಪಾಡಿ ಉಪನ್ಯಾಸ

ಗಾಂಧೀಜೀಯವರ ಪ್ರಭಾವ ವಲಯದೊಳಗಿದ್ದ ಗೋವಿಂದ ಪೈಗಳು: ಗಾಂಧೀಜಿ ಮತ್ತು ಗೋವಿಂದ ಪೈ ಕುರಿತು ಪ್ರೊ.ರಾಜಾರಾಮ ತೋಳ್ಪಾಡಿ ಉಪನ್ಯಾಸ


ಮಂಜೇಶ್ವರ‌: ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಗಾಂಧೀಜಿ‌ ಅವರು ಪ್ರಮುಖರು. ಅವರ ವಿಶಿಷ್ಟವಾದ ದಾರ್ಶನಿಕತೆ ಮತ್ತು ಭಕ್ತಿಯ ಭಾವ ಪ್ರಪಂಚ ಇಂದು ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ರಾಜಾರಾಮ ತೋಳ್ಪಾಡಿ ಹೇಳಿದರು.


ಮಂಜೇಶ್ವರ‌ ಮೂಲಭೂತ ಸೌಕರ್ಯ ಅಭಿವೃದ್ಧಿ ಸೊಸೈಟಿ ಮತ್ತು ಗಿಳಿವಿಂಡು ಜಂಟಿ ಆಶ್ರಯದಲ್ಲಿ ಶುಕ್ರವಾರ  ಮಂಜೇಶ್ವರ‌ದಲ್ಲಿರುವ ಗೋವಿಂದ ಪೈ ಅವರ ನಿವಾಸದ ಪಾರ್ತಿಸುಬ್ಬ ವೇದಿಕೆಯಲ್ಲಿ 'ಗಾಂಧೀಜಿ ಮತ್ತು ರಾಷ್ಟ್ರಕವಿ ಗೋವಿಂದ ಪೈ' ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಗಾಂಧಿ ಅವರ ಪ್ರಾರ್ಥನೆ ಸಭೆಗಳಲ್ಲಿ ಕೇಳುವ ' ವೈಷ್ಣವ ಜನತೋ ತೆನೆ ಕಹಿಯೆ...' ಅಥವಾ ರಘುಪತಿ ರಾಘವ ರಾಜಾರಾಮ...' ಭಜನೆಗಳಲ್ಲಿ ಅಗಾಧವಾದ ಭಕ್ತಿಯ ಮಿಂಚು ಗೋಚರಿಸುತ್ತದೆ. ಶ್ರದ್ಧೆಯ ರಾಮಭಕ್ತ ಗಾಂಧಿ ಅವರಿಗೆ ಈಶ್ವರ ಮತ್ತು ಅಲ್ಲಾ ಇಬ್ಬರೂ ದೇವರಾಗಿ ಗೋಚರಿಸುತ್ತಾರೆ. ಗಾಂಧಿ ಭಕ್ತಿ ಪರಂಪರೆಯ ಅತ್ಯಂತ ಶ್ರೇಷ್ಠ ಆಧುನಿಕ ಅಭಿವ್ಯಕ್ತಿ. ಜೊತೆಯಲ್ಲಿ ಭಾರತದ ಶ್ರೇಷ್ಠ ದಾರ್ಶನಿಕರು ಆಗಿಯೂ ಗಾಂಧಿ ಕಾಣುತ್ತಾರೆ ಎಂದು ಅವರು ಹೇಳಿದರು.

'ಗಾಂಧಿ ಮತ್ತೆ ಬರಬೇಕು'

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಜೀಶ್ ಎಸ್. ಅವರು, ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಗಾಂಧಿ ಅವರನ್ನು ಕುರಿತು ಗೋವಿಂದ ಪೈ ಅವರು ಬರೆದ ವರುಷ 14 ನೀನು ನಮಗೆ ಬಿಡುಗಡೆ ನೀಡಿ, ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು, ಸತ್ತು ಗಡ  ಬದುಕಿದಿ ಮಹಾತ್ಮ, ನೀ ಧನ್ಯ... ಕವಿತೆಗಳಲ್ಲಿ ದೇಶಕ್ಕೆ ಮತ್ತೆ ಗಾಂಧಿ ಬೇಕು; ಅಂದರೆ ಗಾಂಧಿಯವರ ಚಿಂತನೆ ಅಗತ್ಯ ಎನ್ನುವ ಹಂಬಲವನ್ನು ಕಾಣಬಹುದು ಎಂದು ವಿವರಿಸಿದರು.

ಗೋವಿಂದ ಪೈ ಅವರಿಗೆ ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟದ ನಾಯಕರಲ್ಲ. ಬದಲಾಗಿ ಅವರು ಸತ್ಯ, ಅಹಿಂಸೆ, ತ್ಯಾಗ, ಸರಳತೆ, ಸಾಮಾಜಿಕ ಸಮಾನತೆ ಮತ್ತು ಮಾನವೀಯತೆಯ ಪ್ರತೀಕ. ಸ್ವಾತಂತ್ರ್ಯ ಬಂದ ನಂತರವೂ ಈ ಮೌಲ್ಯಗಳು ಸಮಾಜದಲ್ಲಿ ಕ್ಷೀಣಿಸುತ್ತಿರುವುದನ್ನು ಕಂಡು ಪೈ ಅವರು ತಮ್ಮ ಕಾವ್ಯದ ಮೂಲಕ ಆತ್ಮಾವಲೋಕನದ ಅಗತ್ಯವನ್ನು ಪ್ರತಿಪಾದಿಸುತ್ತಾರೆ ಎಂದು  ಡಾ.ಸುಜೀಶ್ ಎಸ್. ಹೇಳಿದರು.

ಗಾಂಧೀಜಿ ಬಯಸಿದ ರಾಮರಾಜ್ಯ, ಸತ್ಯ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಭಾರತ ನಿರ್ಮಾಣವಾಗಿದೆಯೇ ಎಂಬ ಆತ್ಮಾವಲೋಕನ ಕವನದಲ್ಲಿದೆ. ಸ್ವಾತಂತ್ರ್ಯವೆಂದರೆ ಕೇವಲ ವಿದೇಶಿ ಆಳ್ವಿಕೆಯಿಂದ ಮುಕ್ತಿ ಪಡೆಯುವುದಲ್ಲ; ಪ್ರತಿಯೊಬ್ಬ ಮನುಷ್ಯನಿಗೂ ಗೌರವ, ಸಮಾನ ಅವಕಾಶ ಮತ್ತು ಬದುಕುವ ಹಕ್ಕು ದೊರೆಯುವುದು ನಿಜವಾದ ಸ್ವಾತಂತ್ರ್ಯ ಎಂಬ ಸಂದೇಶವನ್ನು ಗೋವಿಂದ ಪೈ ನೀಡುತ್ತಾರೆ ಎಂದು ಅವರು ಹೇಳಿದರು.

ಮಂಜೇಶ್ವರ‌ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ.ಸೈಫುಲ್ಲಾ ತಂಙಳ್, ಗ್ರಾಪಂ ಅಧ್ಯಕ್ಷ ಬಶೀರ್ ಕನಿಲ ಮುಖ್ಯ ಅತಿಥಿಯಾಗಿದ್ದರು.

ಗ್ರಾಪಂ ಸದಸ್ಯೆ ಹರಿಣಾಕ್ಷಿ, ರಾಷ್ಟ್ರಕವಿ ಗೋವಿಂದ ಪೈ ಟ್ರಸ್ಟ್ ಟ್ರಸ್ಟಿ ಡಾ.ಉದಯ ಕುಮಾರ್ ಇರ್ವತ್ತೂರು ಉಪಸ್ಥಿತರಿದ್ದರು.

ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಫರಾನ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಾಪಿಕೆ ಫಾತಿಮಾ ಸಬೀನಾ ಸ್ವಾಗತಿಸಿದರು. ಟ್ರಸ್ಟಿ ಸುಭಾಶ್ಚಂದ್ರ ಕಣ್ವತೀರ್ಥ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article