ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಕ್ರೀಡೋತ್ಸವ-2026
ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರ ಡಾ. ಎನ್.ಟಿ. ಅಂಚನ್ ಸಮಾರಂಭವನ್ನು ಉದ್ಘಾಟಿಸಿ ಯುವಕರಲ್ಲಿ ಶಿಸ್ತು, ಸಂಯಮ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ಮಾದರಿ ಸಂಘಟನೆಯಾಗಿ ಯುವವಾಹಿನಿ ಕಾರ್ಯನಿರ್ವಹಿಸುತ್ತಿದೆ.
ಸಮಾಜದಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು, ಅವರಿಗೆ ಆಳ್ವಾಸ್‌ನಂತಹ ಉತ್ತಮ ವೇದಿಕೆ ದೊರೆತರೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಯುವಜನತೆಯೇ ದೇಶದ ನಿಜವಾದ ಸಂಪತ್ತು. ಯುವಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಿದರೆ ದೇಶದ ಭವಿಷ್ಯ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ.
ಕ್ರೀಡೆಯಲ್ಲಿ ಗೆಲುವು–ಸೋಲು ಸಹಜ. ಗೆದ್ದಾಗ ಅಹಂಕಾರಪಡದೆ, ಸೋತಾಗ ಕುಗ್ಗದೆ, ಎದುರಾಳಿಯನ್ನು ಗೌರವಿಸಿ ಮತ್ತೆ ಪ್ರಯತ್ನಿಸುವ ಮನೋಭಾವವೇ ನಿಜವಾದ ಕ್ರೀಡಾ ಸ್ಫೂರ್ತಿ. ಈ ಮನೋಭಾವವನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಯುವಜನರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಕ್ರೀಡೋತ್ಸವದಂತಹ ಕಾರ್ಯಕ್ರಮಗಳು ಯುವಕರ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ಅವಕಾಶ ಕಲ್ಪಿಸುತ್ತವೆ ಎಂದರು.
ಯುವವಾಹಿನಿಗೆ ಉತ್ತಮ ಭವಿಷ್ಯವಿದ್ದು, ಯುವಕರನ್ನು ಸಂಘಟಿಸಿ ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳುವ ಮೂಲಕ ಸಂಘಟನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೆಳೆಸಬಹುದು ಎಂದರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಯುವವಾಹಿನಿಯ 35 ಘಟಕಗಳ ಭವ್ಯ ಪಥಸಂಚಲನ ನಡೆಯಿತು. ಡಾ. ಮೋಹನ್ ಆಳ್ವ ಅವರನ್ನು ಅಭಿನಂದಿಸಲಾಯಿತು.
ಪಥಸಂಚಲನದಲ್ಲಿ ಧ್ವಜವಂದನೆ ಸ್ವೀಕರಿಸಿದ ಕಾರವಾರ ನೌಕಾನೆಲೆಯ ಐಎನ್‌ಎಸ್ ವಿಕ್ರಮಾದಿತ್ಯದ ಮುಖ್ಯ ವೈದ್ಯಾಧಿಕಾರಿ ಸರ್ಜನ್ ಕಮಾಂಡರ್ ಡಾ. ಅರ್ಜುನ್ ಅಂಚನ್ ಹಾಗೂ ಮಹಿಳಾ ವಿಶ್ವಕಪ್ ಕಬಡ್ಡಿ ವಿಜೇತ ತಂಡದ ಸದಸ್ಯೆ ಧನಲಕ್ಷ್ಮಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕ್ರೀಡೋತ್ಸವದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ ನವೀನ್‌ಚಂದ್ರ ಕರ್ಕೇರ, ಉದ್ಯಮಿ ನಾರಾಯಣ ಪಿ.ಎಂ., ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಡಾ. ಅಮರಶ್ರೀ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಕ್ರೀಡಾ ನಿರ್ದೇಶಕ ಶಂಕರ್ ಎ. ಕೋಟ್ಯಾನ್ ಹಾಗೂ ಯುವವಾಹಿನಿ ಮೂಡುಬಿದಿರೆ ಘಟಕದ ಕ್ರೀಡಾ ನಿರ್ದೇಶಕ ಪ್ರಸಾದ್ ಸುವರ್ಣ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿದರು. ಕ್ರೀಡಾ ನಿರ್ದೇಶಕ ಶಂಕರ್ ಕೋಟ್ಯಾನ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಹಾಗೂ ರಕ್ಷಾ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.