ನಸುಕಿನ ವೇಳೆ ವೇದಾಧ್ಯಯನ ಮಾಡುತ್ತಿದ್ದ ಆಳ್ವಾಸ್ ವಿದ್ಯಾರ್ಥಿ ಈಗ ಇಸ್ರೋದ ವಿಜ್ಞಾನಿ!

ನಸುಕಿನ ವೇಳೆ ವೇದಾಧ್ಯಯನ ಮಾಡುತ್ತಿದ್ದ ಆಳ್ವಾಸ್ ವಿದ್ಯಾರ್ಥಿ ಈಗ ಇಸ್ರೋದ ವಿಜ್ಞಾನಿ!


ಮೂಡುಬಿದಿರೆ: ನುಸುಕಿನ ಜಾವ ವೇದಾಧ್ಯಯನ ಮಾಡುತ್ತಿದ್ದ 10 ವರ್ಷದ ಬಾಲಕನೊಬ್ಬ, ಮುಂದೆ ದೇಶದ ಕಠಿಣ ಜೆಇಇ ಪರೀಕ್ಷೆ ಬರೆದು ಐಐಎಸ್ ಟಿ ಸೇರುತ್ತಾನೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಆದರೆ ಪ್ರಾಚೀನ ವೈದಿಕ ಕಲಿಕೆ ಮತ್ತು ಆಧುನಿಕ ಬಾಹ್ಯಾಕಾಶ ವಿಜ್ಞಾನ ಎರಡನ್ನೂ ಮೈಗೂಡಿಸಿಕೊಂಡು, ಭಾರತೀಯ ಯುವಜನತೆಗೆ ಮಾದರಿಯಾಗಿದ್ದಾರೆ ಕಣ್ಣೂರಿನ ಗೋವಿಂದ ಕೃಷ್ಣನ್. 

ವೇದಗಳ ಕಠಿಣ ಅಭ್ಯಾಸದಿಂದ ಹಿಡಿದು ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ (ISRO) ತಲುಪುವವರೆಗಿನ ಗೋವಿಂದ ಕೃಷ್ಣನ್ ಅವರ ಜೀವನ ಪಯಣ ಭಾರತೀಯ ಯುವಜನತೆಗೆ ಪ್ರೇರಣೆಯಾಗಿದೆ. ಸಾಂಪ್ರದಾಯಿಕ ಶಿಕ್ಷಣದ ಜಾಡನ್ನು ಬಿಟ್ಟು, ಪ್ರಾಚೀನ ಗುರುಕುಲ ಪದ್ಧತಿಯ ಜೊತೆಗೆ ಆಧುನಿಕ ವಿಜ್ಞಾನವನ್ನು ಮೈಗೂಡಿಸಿಕೊಂಡು ಅದ್ಭುತ ಸಾಧನೆ ಮಾಡಬಹುದು ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.

ಅತ್ಯದ್ಭುತ ಸಾಧನೆ ಮಾಡಿದ ಗೋವಿಂದ ಕೃಷ್ಣನ್:

ಕೇರಳದ ಕಣ್ಣೂರಿನ ಮೂಲದವರಾದ ಗೋವಿಂದ ಕೃಷ್ಣನ್ 2011ರಲ್ಲಿ ಪಯ್ಯನ್ನೂರಿನ ಕೇಂದ್ರೀಯ ವಿದ್ಯಾಲಯದಲ್ಲಿ 4ನೇ ತರಗತಿ ಮುಗಿಸಿದ ನಂತರ ಸಾಮಾನ್ಯ ಶಾಲಾ ಶಿಕ್ಷಣಕ್ಕೆ ವಿರಾಮ ನೀಡಿದರು. ಕೇವಲ 10 ವರ್ಷದ ಬಾಲಕನಾಗಿದ್ದಾಗಲೇ ತ್ರಿಶೂರ್‌ನ ಪ್ರಸಿದ್ಧ 'ಬ್ರಹ್ಮಸ್ವಂ ಮಠ' ಗುರುಕುಲವನ್ನು ಸೇರಿದರು. ಅಲ್ಲಿ ಪ್ರತಿದಿನ ಬೆಳಗ್ಗೆ 5 ಗಂಟೆಗೆ ದಿನಚರಿ ಆರಂಭಿಸಿ, ಕಠಿಣ ಮೌಖಿಕ ಪಠಣ ಹಾಗೂ ಕಂಠಪಾಠದ ಮೂಲಕ ಯಜುರ್ವೇದದ ಅಭ್ಯಾಸವನ್ನು ಶುರು ಮಾಡಿದರು. ಸಾಮಾನ್ಯವಾಗಿ 5 ವರ್ಷ ಬೇಕಾಗುವ ಈ ವೈದಿಕ ಕೋರ್ಸ್ ಅನ್ನು ಅವರು ತಮ್ಮ ಏಕಾಗ್ರತೆ ಮತ್ತು ಶ್ರಮದಿಂದ ಕೇವಲ 4 ವರ್ಷಗಳಲ್ಲೇ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ. 

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ:

ವೈದಿಕ ಜ್ಞಾನ ಪಡೆದ ನಂತರ ಗೋವಿಂದ್ ಮತ್ತೆ ಆಧುನಿಕ ಶಿಕ್ಷಣದತ್ತ ಮುಖ ಮಾಡಿದರು. ನಾಡಕ್ಕಾವುವಿನ ವಿವೇಕೋದಯಂ ಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಲೇ ತಮ್ಮ ವೇದಾಧ್ಯಯನವನ್ನೂ ಮುಂದುವರೆಸಿದರು. ತದನಂತರ ಕರ್ನಾಟಕದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು. ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಿದ ಇವರು, ಭಾರತದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಮೇನ್ ಮತ್ತು ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಗಳಲ್ಲಿ ಅತ್ಯುತ್ತಮ ಶ್ರೇಣಿಯೊಂದಿಗೆ ತೇರ್ಗಡೆಯಾದರು.

ಇಸ್ರೋಗೆ ಆಯ್ಕೆಯಾದ ಗೋವಿಂದ್ ಕೃಷ್ಣನ್:

ಜೆಇಇ ಸಾಧನೆಯ ಆಧಾರದ ಮೇಲೆ ಅವರಿಗೆ 2021ರಲ್ಲಿ ತಿರುವನಂತಪುರದಲ್ಲಿರುವ ಪ್ರತಿಷ್ಠಿತ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ' (IIST) ಸಂಸ್ಥೆಯಲ್ಲಿ ಪ್ರವೇಶ ದೊರೆಯಿತು. ಅಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಬಿ.ಟೆಕ್ ಪದವಿ ಪಡೆದರು. ಇಂಜಿನಿಯರಿಂಗ್ ಪೂರ್ಣಗೊಳ್ಳುತ್ತಿದ್ದಂತೆ ಇಸ್ರೋ ಕೇಂದ್ರೀಕೃತ ನೇಮಕಾತಿ ಮಂಡಳಿಯ (ICRB) ಪ್ರಕ್ರಿಯೆಯ ಮೂಲಕ ನೇರ ಆಯ್ಕೆ ಆದರು.

ಗೋವಿಂದ್ ಕೃಷ್ಣನ್ ಪ್ರಸ್ತುತ ಎಲ್ಲಿ ಕೆಲಸ ಮಾಡುತ್ತಿದ್ದಾರೆ?

ಪ್ರಸ್ತುತ ಅವರು ತಿರುವನಂತಪುರದ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಡಾವಣಾ ವಾಹನಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಕೇಂದ್ರದಲ್ಲಿ ತಮ್ಮ ಸೇವೆ ಆರಂಭಿಸುವ ಮೂಲಕ ಪ್ರಾಚೀನ ವೈದಿಕ ಪಾರಂಪರಿಕ ಜ್ಞಾನ ಮತ್ತು ಆಧುನಿಕ ಬಾಹ್ಯಾಕಾಶ ವಿಜ್ಞಾನವೆರಡನ್ನೂ ಸಮ್ಮಿಲನಗೊಳಿಸಿದ ವಿಶಿಷ್ಟ ಸಾಧಕರೆನಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಗೋವಿಂದ ಕೃಷ್ಣನ್ ಅವರು ಮಾಡಿದ ಈ ಅತ್ಯದ್ಭುತ ಸಾಧನೆ ಮಾಡುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದು, ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಅದರಲ್ಲೂ ವಿಶೇಷ ಅಂದ್ರೆ ಕರ್ನಾಟಕದ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವುದು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article