ಮುದ್ದಣಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಅಂಗುಲಿಮಾಲನ ಎದುರುಕೂತ ಬುದ್ಧ ನೀನಲ್ಲ’ ಎಂಬ ಹಸ್ತಪ್ರತಿ ಆಯ್ಕೆ
Friday, October 30, 2026
ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2026ರ ಸಾಲಿನ ಪ್ರತಿಷ್ಠಿತ ಮುದ್ದಣಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಅಂಗುಲಿಮಾಲನ ಎದುರುಕೂತ ಬುದ್ಧ ನೀನಲ್ಲ’ ಎಂಬ ಹಸ್ತಪ್ರತಿ ಆಯ್ಕೆಯಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ಘೋಷಿಸಿದ್ದಾರೆ.
ಈ ಸಾಲಿನ ಪ್ರಶಸ್ತಿ ಸ್ಪರ್ಧೆಗೆ ಒಟ್ಟು 38 ಹಸ್ತಪ್ರತಿಗಳು ಬಂದಿದ್ದವು. ಪ್ರಸಿದ್ಧ ವಿಮರ್ಶಕರಾದ ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್), ಡಾ. ರವಿಶಂಕರ್ ಜಿ.ಕೆ. ಹಾಗೂ ಟಿ.ಎ.ಎನ್. ಖಂಡಿಗೆ ಅವರು ನೀಡಿದ ಅಂಕಗಳ ಆಧಾರದಲ್ಲಿ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಶಸ್ತಿಯು 10 ಸಾವಿರ ರೂ. ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು 2027ರ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನೂರು ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.