ಮೂಡುಬಿದಿರೆ ಆಡಳಿತ ಸೌದದಲ್ಲಿ ಯುವ ಸಂಸತ್ ಸಭೆ
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಜವಾಬ್ದಾರಿಯ ವಿಚಾರಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಲು ಇಂತಹ ಕಾಯ೯ಕ್ರಮಗಳು ಸಹಕಾರಿ. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಬಹುದು ಎಂದು ತಿಳಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಶ್ರೀಧರ್ ಎಂ, ವಿದ್ಯಾರ್ಥಿಗಳಿಗೆ ಸಂಸತ್ತಿನ ಬಗ್ಗೆ ತಿಳಿವಳಿಕೆ ಇರುವುದು ಅತ್ಯಗತ್ಯ. ಸಂಸತ್ತಿನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಕಲಾಪಗಳನ್ನು ನಡೆಸುವುದರಿಂದ ಉತ್ತಮ ನಾಗರಿಕತ್ವದ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.
ಯುವ ಸಂಸತ್ ಕಲಾಪದಲ್ಲಿ ಜೈನ ಪ. ಪೂ. ಕಾಲೇಜಿನ ಸಾನಿಕ ಆಳ್ವ ಮುಖ್ಯಮಂತ್ರಿಯಾಗಿ, ಭವನ ಜ್ಯೋತಿಯ ಲಕ್ಷ್ಮಿ ಉಪಮುಖ್ಯಮಂತ್ರಿಯಾಗಿ ಹಾಗೂ ಪವನ್ ಎಂಪಿ ವಿರೋಧ ಪಕ್ಷದ ನಾಯಕರಾಗಿ ಪಾಲ್ಗೊಂಡರು. ಇತರ ವಿದ್ಯಾರ್ಥಿಗಳು ಮಂತ್ರಿಗಳಾಗಿ ಭಾಗವಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಮೋಹನ್ ದಾಸ್ ಕೆ, ಶಿರ್ತಾಡಿ ಕಾನೂನು ಕಾಲೇಜಿನ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆಯ ಜಯಶ್ರೀ ಹಾಗೂ ಪ್ರವೀಣ್ ಭಂಡಾರಿ, ಪುರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಕೇಶವ್ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನ್ ರೊನಾಲ್ಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಂತೋಷ್ ವಂದಿಸಿದರು.
