ಹಿರಿಯರನ್ನು ನಿಲ೯ಕ್ಷಿಸಿದರೆ ಕಾನೂನಿನ್ವಯ ಶಿಕ್ಷೆ: ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಫವಾಜ್ ಪಿ.ಎ.

ಹಿರಿಯರನ್ನು ನಿಲ೯ಕ್ಷಿಸಿದರೆ ಕಾನೂನಿನ್ವಯ ಶಿಕ್ಷೆ: ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಫವಾಜ್ ಪಿ.ಎ.


ಮೂಡುಬಿದಿರೆ: ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವವರು ಅವರನ್ನು ನಿರ್ಲಕ್ಷಿಸಿದರೆ, ಕಾನೂನಿನನ್ವಯ ದಂಡ ಅಥವಾ ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಮೂಡುಬಿದಿರೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಫವಾಜ್ ಪಿ.ಎ. ಹೇಳಿದರು.

ಮೂಡುಬಿದಿರೆ ಆಡಳಿತ ಸೌಧ ಸಭಾಂಗಣದಲ್ಲಿ ಬುಧವಾರ ನಡೆದ 2026-27ನೇ ಸಾಲಿನ ಕೇಂದ್ರ ಸರಕಾರದ ಹಿರಿಯ ನಾಗರಿಕರ ರಾಜ್ಯ ಕ್ರಿಯಾ ಯೋಜನೆಯಂತೆ ತಾಲೂಕು ಮಟ್ಟದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.

ಹಿರಿಯ ನಾಗರಿಕರ ಹಕ್ಕುಗಳು ಮತ್ತು ಜೀವನ ನಿರ್ವಹಣೆಯ ರಕ್ಷಣೆಗೆ 2007ರ ಹಿರಿಯ ನಾಗರಿಕರ ಕಾಯ್ದೆಯಡಿ ಹಲವು ಅವಕಾಶಗಳಿವೆ. ಹಕ್ಕುಗಳಿಗೆ ತೊಂದರೆಯಾದ ಸಂದರ್ಭದಲ್ಲಿ ರೆವೆನ್ಯೂ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಆರ್‌ಡಿಒ) ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಈ ಅಧಿಕಾರವು ಸಾಮಾನ್ಯವಾಗಿ ಅಸಿಸ್ಟೆಂಟ್ ಕಮಿಷನರ್ ಹುದ್ದೆಯ ಅಧಿಕಾರಿಯ ವ್ಯಾಪ್ತಿಯಲ್ಲಿರುತ್ತದೆ ಎಂದ ಅವರು 

ಜೀವನ ನಿರ್ವಹಣೆಗೆ ಸಂಬಂಧಿಸಿದ ಅರ್ಜಿಗಳನ್ನು 90 ದಿನಗಳೊಳಗೆ ವಿಲೇವಾರಿ ಮಾಡುವ ವ್ಯವಸ್ಥೆ ಕಾನೂನಿನಲ್ಲಿದೆ. ಅರ್ಹ ಪ್ರಕರಣಗಳಲ್ಲಿ ಮಾಸಿಕ ರೂ.10,000ರವರೆಗೆ ಜೀವನ ನಿರ್ವಹಣಾ ಮೊತ್ತವನ್ನು ನಿಗದಿಪಡಿಸುವ ಅಧಿಕಾರವಿದೆ ಎಂದು ಫವಾಜ್ ಪಿ.ಎ. ತಿಳಿಸಿದರು.

ಕರ್ನಾಟಕ ಸರ್ಕಾರದ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದ.ಕ. ಕಾನೂನು ಪ್ರಾಧಿಕಾರ ಮಂಗಳೂರು, ತಾಲೂಕು ಆಡಳಿತ ಸೌಧ ಮೂಡುಬಿದಿರೆ, ತಾಲೂಕು ಪಂಚಾಯತ್ ಮೂಡುಬಿದಿರೆ ಹಾಗೂ ಪುರಸಭೆ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಖಾದಿರ ಸಾಬ್ ನದಾಫ್, ನಿಟ್ಟೆ ವಿಶೇಷ ಮಕ್ಕಳ ಹಾರೈಕೆ ಕೇಂದ್ರದ ಅಧ್ಯಕ್ಷೆ ಡಾ. ಅಮರಶ್ರೀ ಅಮರನಾಥ್ ಶೆಟ್ಟಿ, ಮೂಡುಬಿದಿರೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಪ್ರತಿಭಾ ಕೆ.ಸಿ., ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಅಂಗನವಾಡಿ ಕಾರ್ಯಕರ್ತರ ಮೇಲ್ವಿಚಾರಕಿ ವೀಣಾ ಎಸ್. ಹೆಗ್ಡೆ, ವಕೀಲರ ಸಂಘ ಮೂಡುಬಿದಿರೆಯ ಅಧ್ಯಕ್ಷ ಶರತ್ ಡಿ. ಶೆಟ್ಟಿ, ಇನ್ನರ್ ವೀಲ್ ಉಪಾಧ್ಯಕ್ಷೆ ಅನಿತಾ ಪಿ. ಶೆಟ್ಟಿ, ಬಂಟರ ಮಹಿಳಾ ಸಂಘ ಮೂಡುಬಿದಿರೆಯ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ, ಮೌಂಟ್ ರೋಸರಿಯೊ ಇನ್ಸ್ಟಿಟ್ಯೂಟ್ ಆಲಂಗಾರಿನ ನಿರ್ದೇಶಕಿ ಸಿಸ್ಟರ್ ಪ್ರೆಸಿಲ್ಲಾ ಡಿಮೆಲ್ಲೋ ಮುಖ್ಯ ಅತಿಥಿಗಳಾಗಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ, ಮಧ್ಯಸ್ಥಗಾರರು ಹಾಗೂ ಮಂಗಳೂರು ಮಾಜಿ ಬಾಲನ್ಯಾಯ ಮಂಡಳಿ ಸದಸ್ಯೆ ಗೌರಿ ಕೆ.ಎಸ್. ಭಾಗವಹಿಸಿದ್ದರು.

ತಾಲೂಕು ಸಂಯೋಜಕ ಜಯಪ್ರಕಾಶ್ ಕುಲಾಲ್ ನಿರೂಪಿಸಿದರು. ಮೂಡುಬಿದಿರೆ ಹಾಗೂ ಉಳ್ಳಾಲ ನಗರ ಪುನರ್ವಸತಿ ಕಾರ್ಯಕರ್ತರು ಮತ್ತು ಮೂಡುಬಿದಿರೆ ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article