ಅ.17 ರಂದು ಕುಂಬ್ರದಲ್ಲಿ ಮಾರ್ನೆಮಿದ ಗೌಜಿ: ಹಳ್ಳಿ ಸೊಗಡಿನ ‘ಅಕ್ಕಿ ಮುಡಿ’ ಬಹುಮಾನ
ಪುತ್ತೂರು: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಬಾಂತಲಪ್ಪು ಜನಸೇವಾ ಸಮಿತಿ ವತಿಯಿಂದ ಕಳೆದ 3 ವರ್ಷಗಳಿಂದ ವಿಶಿಷ್ಟ ಮಾರ್ನೆಮಿದ ಗೌಜಿ ಎಂಬ ಕಾರ್ಯಕ್ರಮನಡೆಸಿಕೊಂಡು ಬರಲಾಗುತ್ತಿದೆ. ಇದೀಗ 4 ನೇ ವರ್ಷದ ಈ ಕಾರ್ಯಕ್ರಮ ಅ.17ರಂದು ಕುಂಬ್ರ ಜಂಕ್ಷನ್ ಸಮೀಪದ ಕುಂಬ್ರ ಚೆನ್ನಪ್ಪ ರೈ-ಜತ್ತಪ್ಪ ರೈ ಸ್ಮಾರಕ ಅಶ್ವತ್ಥಕಟ್ಟೆಯ ಬಳಿಯಲ್ಲಿ ನಡೆಯಲಿದೆ ಎಂದು ಬಾಂತಲಪ್ಪು ಜನಸೇವಾ ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಆಯ್ದ ಮಾರ್ನೆಮಿ ವೇಷಧಾರಿಗಳಿಗೆ ಗುಂಪು ಹಾಗೂ ವೈಯುಕ್ತಿಕ ಸ್ಪರ್ಧೆ ಆಯೋಜಿಸಲಾಗಿದೆ. ತುಳುನಾಡಿನ ಪರಂಪರೆಯ ಬದುಕಿಗೆ ಅರ್ಥ ನೀಡುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಶೇಷವಾಗಿ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಗೆ ಹಳ್ಳಿಯ ಸೊಗಡನ್ನು ತರುವಂತೆ ಮೊದಲ ವಿಜೇತ ಗುಂಪಿಗೆ 2 ಅಕ್ಕಿ ಮುಡಿ, ದ್ವಿತೀಯ ಸ್ಥಾನಿಗೆ 1 ಅಕ್ಕಿ ಮುಡಿ ಹಾಗೂ ತೃತೀಯ ಸ್ಥಾನಿಗೂ 1 ಅಕ್ಕಿ ಮುಡಿ ಬಹುಮಾನ ನೀಡಲಾಗುವುದು. ವೈಯುಕ್ತಿಕ ಸ್ಪರ್ಧೆಯಲ್ಲಿಯೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಸಂಜೆ 5 ಗಂಟೆಗೆ ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ತಾರನಾಥ್ ಕಾಪಿಕಾಡ್ ಅವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಬೆಳ್ಳಿಪ್ಪಾಡಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ, ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು,
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಎಸ್ ಅಂಗಾರ, ಅರಿಯಡ್ಕ ಚಿಕ್ಕಪ್ಪ ನಾಕ್, ಕಾವು ಹೇಮನಾಥ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಅಹಮ್ಮದ್ ಸಾದಿಕ್, ಮಹಮ್ಮದ್ ಬಡಗನ್ನೂರು ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಕರ್ನಾಟಕ ತುಳು ಅಕಾಡೆಮಿ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.