ಉಪ್ಪಿನಂಗಡಿ ಭಾಗದಲ್ಲಿ ಭಾರೀ ಮಳೆ: ರಾ.ಹೆದ್ದಾರಿ ಸಂಚಾರಕ್ಕೆ ಅಡಚಣೆ-ಅಡಿಕೆ ಭತ್ತಕ್ಕೆ ಹಾನಿ
ಕಳೆದ ಕೆಲ ದಿನಗಳಿಂದ ಸಂಜೆ ಹೊತ್ತು ಮಳೆ ಬರುತ್ತಿದ್ದು, ಜನಜೀವನಕ್ಕೆ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಶುಕ್ರವಾರ ಸುರಿದ ಮಳೆಯ ಅಬ್ಬರ ಸಮಸ್ಯೆಗಳನ್ನೇ ಸೃಷ್ಟಿ ಮಾಡಿದೆ. ಈ ವರ್ಷದಲ್ಲಿ ಕಾಣದಿದ್ದ ಭಾರೀ ಮಳೆ ಸುರಿದು ಅಡಿಕೆ ತೋಟ, ಗದ್ದೆ, ತೋಡು, ತೊರೆಗಳನ್ನು ಒಂದಾಗಿಸಿದೆ. ಸುಮಾರು 3 ಗಂಟೆಗೆ ಆರಂಭವಾದ ಮಳೆ 4.15 ತನಕ ನಿರಂತರವಾಗಿ ಸುರಿಯಿತು. ಈ ಮಳೆಗೆ ಗ್ರಾಮೀಣ ಭಾಗಗಳಲ್ಲಿ ತೋಡುಗಳು ತುಂಬಿ ಹರಿದ ಕಾರಣ ಅಡಿಕೆ ತೋಟಗಳು ಮತ್ತು ಭತ್ತದ ಗದ್ದೆಗಳು ಜಲಾವೃತಗೊಂಡವು. ಈಗಾಗಲೇ ಹಣ್ಣಾಗಿ ಬಿದ್ದ ಅಡಿಕೆ ಹಾಗೂ ಕೊಯ್ಲಿಗೆ ಸಿದ್ಧವಾಗಿರುವ ಭತ್ತದ ಬೆಳೆಗೆ ಅಪಾರ ಹಾನಿ ಉಂಟಾಗಿದೆ.
ಹೆದ್ದಾರಿ ಜಲಾವೃತ:
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿಂದ ಸುಮಾರು 2 ಕಿಮೀ ದೂರದ ಕಾಂಚನ ಕ್ರಾಸ್ ಭಾಗದಲ್ಲಿ ಅಲ್ಲಲ್ಲಿ ಮಳೆನೀರಿನಿಂದ ರಸ್ತೆ ಜಲಾವೃತಗೊಂಡ ಪರಿಣಾಮ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಬೆದ್ರೋಡಿ, ವಳಾಲು, ವಳಾಲುಬೈಲು, ನೀರಕಟ್ಟೆ ಹಾಗೂ ಕಾಂಚನಕ್ರಾಸ್ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದ್ದು, ಹೆದ್ದಾರಿ ಬದಿಯ ಚರಂಡಿ ಮೋರಿಗಳಲ್ಲಿ ನೀರುಹರಿಯಲು ಸಾಧ್ಯವಾಗದೆ ಹೆದ್ದಾರಿ ಜಲಾವೃತಗೊಂಡಿತು. ವಾಹನಗಳು ಸಾಲುಗಟ್ಟಿ ನಿಲ್ಲುವ ಸ್ಥಿತಿ ಉಂಟಾಯಿತು.