ಖಾಸಗಿ ಟ್ರಸ್ಟ್ ಸ್ವಾಧೀನ ಜಾಗ ದೇವಳಕ್ಕೆ ನ್ಯಾಯ ಸಿಗುವ ತನಕ ಹೋರಾಟ: ದೇವಸ್ಥಾನ ಸಂರಕ್ಷಣಾ ವೇದಿಕೆ
ಪುತ್ತೂರು: ಸೌತಡ್ಕ ದೇವಸ್ಥಾನಕ್ಕೆ ಕಾಯ್ದಿರಿಸಿದ ಜಾಗ ಹಾಗೂ ಭಕ್ತರ ಸಹಕಾರದಿಂದ ಖರೀದಿಸಿದ ಜಾಗವು ಪ್ರಸ್ತುತ ಖಾಸಗಿ ಟ್ರಸ್ಟ್ ವೊಂದರ ಸ್ವಾಧೀನದಲ್ಲಿದ್ದು, ಅದನ್ನು ರಾಜ್ಯ ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆ ದೇವಸ್ಥಾನದ ಸ್ವಾಧೀನಕ್ಕೆ ವಹಿಸಲು ಕ್ರಮಕೈಗೊಳ್ಳಬೇಕು ಎಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಶಾಂತ ರೈ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೌತಡ್ಕ ದೇವಸ್ಥಾನವು ರಾಜ್ಯ ಮುಜರಾಯಿ ಇಲಾಖೆಯ ಅಧೀನದ ಎ ಗ್ರೇಡ್ ದೇವಸ್ಥಾನವಾಗಿದ್ದು, ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ದೇವಸ್ಥಾನದ ಮುಂದಿನ ಜಾಗವು ದೇವಸ್ಥಾನದ ಸ್ವಾಧೀನದಲ್ಲಿ ಇಲ್ಲದೆ ಅಲ್ಲಿನ ಅಂಗಡಿ ಕೋಣೆಗಳ ಬಾಡಿಗೆ ದೇವಸ್ಥಾನಕ್ಕೆ ಬರುತ್ತಿಲ್ಲ. ಈ ಗೊಂದಲದ ಕಾರಣದಿಂದ ಕಳೆದ ಕೆಲವು ದಿನಗಳ ಹಿಂದೆ ನಡೆದ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಯಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಸ್ವಾಧೀನ ಮಾಡಿಕೊಳ್ಳಲು ಸಮಿತಿಯು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಸರ್ಕಾರ ಸ್ವಾಧೀನ ಪಡೆಸಿಕೊಂಡಿಲ್ಲ. ಹೀಗಾಗಿ ದೇವಸ್ಥಾನಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್, ಪ್ರಮುಖರಾದ ರೂಪೇಶ್ ರೈ ಅಲಿಮಾರ್, ಬಿ.ಎಂ.ಭಟ್ ಉಪಸ್ಥಿತರಿದ್ದರು.