ಸುಬ್ರಹ್ಮಣ್ಯದ ದಂತ ವೈದ್ಯ ಡಾ. ಚರಣ್ ಶೆಟ್ಟಿಗೆ ಬೀಳ್ಕೊಡುಗೆ

ಸುಬ್ರಹ್ಮಣ್ಯದ ದಂತ ವೈದ್ಯ ಡಾ. ಚರಣ್ ಶೆಟ್ಟಿಗೆ ಬೀಳ್ಕೊಡುಗೆ


ಸುಬ್ರಹ್ಮಣ್ಯ: ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿಯ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಾನಂದ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಕೇಂದ್ರದ ದಂತ ವೈದ್ಯ ಡಾ. ಚರಣ್ ಶೆಟ್ಟಿ ಅವರಿಗೆ ಬುಧವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದವರಾದ ಡಾ. ಚರಣ್ ಶೆಟ್ಟಿ ಅವರು ಕೆವಿಜಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿ.ಡಿ.ಎಸ್. ಪದವಿ ಪಡೆದು, 2015ರಲ್ಲಿ ಸುಬ್ರಹ್ಮಣ್ಯದ ಸದಾನಂದ ಹೆಲ್ತ್ ಸೆಂಟರ್‌ನಲ್ಲಿ ದಂತ ವೈದ್ಯರಾಗಿ ಸೇವೆ ಆರಂಭಿಸಿದ್ದರು. ಕಳೆದ 11 ವರ್ಷಗಳಿಂದ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಜನರಿಗೆ ದಂತ ಚಿಕಿತ್ಸಾ ಸೇವೆ ನೀಡಿರುವ ಅವರು, ಸರಳ ವ್ಯಕ್ತಿತ್ವ ಹಾಗೂ ರೋಗಿಗಳೊಂದಿಗೆ ಆತ್ಮೀಯವಾಗಿ ವರ್ತಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದರು.

ವೈಯಕ್ತಿಕ ಒತ್ತಡಗಳ ನಡುವೆಯೂ ನಗುಮುಖದಿಂದ ಸಿಬ್ಬಂದಿ ಹಾಗೂ ರೋಗಿಗಳೊಂದಿಗೆ ಬೆರೆಯುತ್ತಾ ಚಿಕಿತ್ಸೆ ನೀಡುತ್ತಿದ್ದ ಅವರ ಸೇವೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅವರು ಸುಬ್ರಹ್ಮಣ್ಯದಿಂದ ನಿರ್ಗಮಿಸಿ ನಿಟ್ಟೆ ಹೆಲ್ತ್ ಸೆಂಟರ್‌ನಲ್ಲಿ ಮುಂದಿನ ಸೇವೆ ಆರಂಭಿಸಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಾಧಿಕಾರಿ ಡಾ. ವಿಕ್ರಂ ಶೆಟ್ಟಿ, ‘ಡಾ. ಚರಣ್ ಶೆಟ್ಟಿ ಅವರು ನಿಷ್ಠಾವಂತ ವೈದ್ಯರು ಎನ್ನುವುದಕ್ಕಿಂತಲೂ ನನಗೆ ಬಹಳ ಆತ್ಮೀಯರು. ನನ್ನ ಒಡಹುಟ್ಟಿದ ಅಣ್ಣನಂತಿರುವ ಸರಳ ವ್ಯಕ್ತಿತ್ವದ ವ್ಯಕ್ತಿ. ಇಂತಹ ಸ್ನೇಹಿತರೊಂದಿಗೆ ಇಷ್ಟು ವರ್ಷ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಇದೀಗ ಅವರು ಇಲ್ಲಿಂದ ತೆರಳುತ್ತಿರುವುದು ವೈಯಕ್ತಿಕವಾಗಿ ನನಗೆ ತುಂಬಾ ಬೇಸರ ಉಂಟುಮಾಡಿದೆ’ ಎಂದು ತಮ್ಮ ಆತ್ಮೀಯತೆಯನ್ನು ಹಂಚಿಕೊಂಡರು.

ಬೀಳ್ಕೊಡುಗೆ ಕುರಿತು ಮಾತನಾಡಿದ ಡಾ. ಚರಣ್ ಶೆಟ್ಟಿ, ‘ಸುಬ್ರಹ್ಮಣ್ಯದ ಜನರು ತೋರಿಸಿದ ಪ್ರೀತಿ ಹಾಗೂ ಆತ್ಮೀಯತೆಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಇಲ್ಲಿ ೧೧ ವರ್ಷ ಸೇವೆ ಸಲ್ಲಿಸಿ ತೆರಳುವುದು ಮನಸ್ಸಿಗೆ ತುಂಬಾ ಬೇಸರ ತಂದಿದೆ. ಆದರೆ ಅನಿವಾರ್ಯ ಕಾರಣಗಳಿಂದ ಇಲ್ಲಿಂದ ತೆರಳಬೇಕಾಗಿದೆ’ ಎಂದು ತಿಳಿಸಿದರು.

ಸದಾನಂದ ಕ್ಲಿನಿಕ್‌ನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಗಣ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದು, ಡಾ. ಚರಣ್ ಶೆಟ್ಟಿ ಅವರ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article