ಅ.24, 25: ಉಜಿರೆಯಲ್ಲಿ ಜಿಲ್ಲಾ 12ನೇ ಗಮಕ ಸಮ್ಮೇಳನ-2026

ಅ.24, 25: ಉಜಿರೆಯಲ್ಲಿ ಜಿಲ್ಲಾ 12ನೇ ಗಮಕ ಸಮ್ಮೇಳನ-2026


ಉಜಿರೆ: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬೆಳ್ತಂಗಡಿ ತಾಲೂಕು ಘಟಕಗಳ ಜಂಟಿ ಸಹಯೋಗದಲ್ಲಿ ದ.ಕ. ಜಿಲ್ಲಾ 12ನೇ ಗಮಕ ಸಮ್ಮೇಳನವು ಅ.24 ಮತ್ತು ಅ.25 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ತಿಳಿಸಿದರು.

ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಹಿರಿಯ ಗಮಕಿ ಧರ್ಮಸ್ಥಳದ ಜಯರಾಮ ಕುದ್ರೆತ್ತಾಯರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

ಸಮ್ಮೇಳನವನ್ನು ಅ.24 ರಂದು ಬೆಳಗ್ಗೆ 10.30ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ‘ಗಮಕ ಜನಾರ್ದನ’ ಸ್ಮರಣ ಸಂಚಿಕೆಯನ್ನು ಸಾಂಕೇತಿಕವಾಗಿ ಅನಾವರಣಗೊಳಿಸಲಿದ್ದಾರೆ. ಪ್ರೊ. ಮಧೂರು ಮೋಹನ ಕಲ್ಲೂರಾಯರು ಅಧ್ಯಕ್ಷತೆ ವಹಿಸಲಿದ್ದಾರೆ.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮುಳಿಯ ಶಂಕರ ಭಟ್, ಶಾಸಕ ಹರೀಶ್ ಪೂಂಜ, ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷ್ಮಿನಾರಾಯಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಡಬಿದ್ರೆ ತಾಲೂಕು ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಶ್ರೀಪತಿ ಭಟ್ ಮೂಡಬಿದ್ರೆ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ  ಶಶಿಧರ ಜಿ.ಎಸ್., ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಕಿರಣ್ ಉಪಸ್ಥಿತರಿರುವರು ಎಂದರು.

ಇದೇ ಸಂದರ್ಭದಲ್ಲಿ ಗಮಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಕೆ. ಸುರೇಶ್ ಕುದ್ರೆಂತಾಯ, ಪ್ರೊ. ವೇದವ್ಯಾಸ ರಾಮಕುಂಜ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್, ಕೆಯ್ಯೂರು ನಾರಾಯಣ ಭಟ್, ಗಮಕಿ ಶ್ರೀಮತಿ ಸುವರ್ಣ ಕುಮಾರಿ ಕೆ.ಆರ್., ಗಮಕಿ ಎ.ಡಿ ಸುರೇಶ್ ಇವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಪಾವಂಜೆ ಹರಿದಾಸ ಲಕ್ಷ್ಮಿನಾರ್ಣಪ್ಪಯ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.

ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಗಮಕ ವಾಚನ ವೈವಿಧ್ಯ ಗೋಷ್ಠಿ ನಡೆಯಲಿದೆ. ಅಪರಾಹ್ನ ಗಂಗಮ್ಮ ಕೇಶವಮೂರ್ತಿ ಅವರಿಂದ ರನ್ನನ ಭೀಮಸೇನ ವಿಜಯದ ಆಯ್ದ ಕಾವ್ಯ ಭಾಗದ ಗಮಕ ವಾಚನ ಹಾಗೂ ಸಂತೋಷ್ ಭಾರದ್ವಾಜ್ ಅವರಿಂದ ವ್ಯಾಖ್ಯಾನ ನಡೆಯಲಿದೆ. ಡಾ. ಟಿ. ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗಮಕ ನೃತ್ಯ ರೂಪಕದಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಸಹೋದರಿಯರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಪ್ರಕಾಶ ನಾರಾಯಣ ಅಧ್ಯಕ್ಷತೆಯಲ್ಲಿ ಯಕ್ಷ ಗಮಕ ಪ್ರಯೋಗ ಗೋಷ್ಠಿ ನಡೆಯಲಿದೆ ಎಂದರು.

ಅ.25 ರಂದು ಸೋನಿಯಾ ಯಶೋವರ್ಮ ಅಧ್ಯಕ್ಷತೆಯಲ್ಲಿ ಯುವ ಗಮಕ ಕಾರ್ಯಕ್ರಮ ಹಾಗೂ ರವಿಶಂಕರ ಮಯ್ಯ ಅಧ್ಯಕ್ಷತೆಯಲ್ಲಿ ಜಗದೀಶ್ ಭಟ್ ಮತ್ತು ಯೋಗ ವಿದ್ಯಾರ್ಥಿಗಳಿಂದ ಯೋಗ ಗಮಕ ನಡೆಯಲಿದೆ. ಮನೋರಮಾ ತೋಳ್ಪಡಿತ್ತಾಯ ಅಧ್ಯಕ್ಷತೆಯಲ್ಲಿ ಗಮಕಾರ್ಥಗಾರಿಕೆ ಗೋಷ್ಠಿ ಹಾಗೂ ಮುನಿರಾಜ ರೆಂಜಾಳ ವ್ಯಾಖ್ಯಾನಕ್ಕೆ ಕಲಾವಿದ ವಿ.ಕೆ. ವಿಟ್ಲ ಚಿತ್ರ ಗಮಕ ವೈವಿಧ್ಯ ನಡೆಸಿಕೊಡಲಿದ್ದಾರೆ. ಸಂಜೆ ಮಧೂರು ಮೋಹನ ಕಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿ. ದಕ್ಷಿಣಾಮೂರ್ತಿ ಸಮಾರೋಪ ಭಾಷಣ ಮಾಡಲಿದ್ದಾರೆ. ಧರ್ಮಸ್ಥಳದ ಡಿ ಹರ್ಷೇನ್ದ್ರಕುಮಾರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಶರತ್ ಕೃಷ್ಣ ಪಡುವೆಟ್ನಾಯ, ಕೆ. ಪ್ರತಾಪಸಿಂಹ ನಾಯಕ, ಪ್ರದೀಪಕುಮಾರ್ ಕಲ್ಕೂರ, ಡಾ. ಶ್ರೀನಾಥ ಎಂ.ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿ ಸಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಗಮಕ ಕಲಾ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ, ಸ್ಮರಣ ಸಂಚಿಕೆ ಸಂಪಾದಕ ಡಾ. ಶ್ರೀಧರ್ ಭಟ್, ಸಮ್ಮೇಳನ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಮಯ್ಯ, ಆರ್ಥಿಕ ಸಮಿತಿಯ ಸಹ ಸಂಚಾಲಕ ಅಶೋಕ ಭಟ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article