ಬೋಳಿಯಾರಿನಲ್ಲಿ ಪಿಕಪ್-ಸ್ಕೂಟರ್ ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು: ಪಿಕಪ್ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲು

ಬೋಳಿಯಾರಿನಲ್ಲಿ ಪಿಕಪ್-ಸ್ಕೂಟರ್ ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು: ಪಿಕಪ್ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲು

ಮಂಗಳೂರು: ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಪಿಕಪ್ ವಾಹನದಿಂದ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮದ ಉಕ್ಕುಡ ಹೌಸ್ ನಿವಾಸಿ ಇಸ್ಮಾಯಿಲ್ ನೀಡಿದ ದೂರಿನ ಆಧಾರದಲ್ಲಿ ಪಿಕಪ್ ಚಾಲಕ ಹಫೀಜ್ ಅಲಿಯಾಸ್ ಅಪ್ಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 103(1)ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅ.19ರಂದು ಸಂಜೆ 4ರಿಂದ 4.15ರ ನಡುವೆ ಘಟನೆ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಗಲಾಟೆ ಬಳಿಕ ಬೆನ್ನಟ್ಟಿದ ಆರೋಪ:

ದೂರಿನ ಪ್ರಕಾರ, ಇಸ್ಮಾಯಿಲ್ ಅವರ ಹಿರಿಯ ಮಗ ಮೊಹಮ್ಮದ್ ಝುನೈದ್ (23) ಕಲ್ಲಾಪು ಬಳಿಯ ಗ್ಲೋಬಲ್ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅ.19ರಂದು ಮುಂಜಾನೆ 3 ಗಂಟೆಗೆ ಕೆಲಸಕ್ಕೆ ತೆರಳಿದ್ದ ಅವರು, ಬೆಳಗ್ಗೆ 11ಕ್ಕೆ ಮನೆಗೆ ಮರಳಿದ್ದರು. ಬಳಿಕ ಊಟ ಮುಗಿಸಿ ಮಧ್ಯಾಹ್ನ 1.30ರ ಸುಮಾರಿಗೆ ನೆರೆಮನೆಯ ಮೊಹಮ್ಮದ್ ಅಫ್ರಾಝ್ (23) ಜತೆ ಸ್ಕೂಟರ್‌ನಲ್ಲಿ ತೆರಳಿದ್ದರು.

ಸಂಜೆ 5ರ ಸುಮಾರಿಗೆ ಇಸ್ಮಾಯಿಲ್ ಅವರ ಸಹೋದ್ಯೋಗಿ ಕೆ.ಎಂ. ಅಬ್ಬಾಸ್ ಕರೆ ಮಾಡಿ, ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಝುನೈದ್ ಅಪಘಾತಕ್ಕೀಡಾಗಿದ್ದು, ಅವರನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದರು. ಇಸ್ಮಾಯಿಲ್ ಆಸ್ಪತ್ರೆಗೆ ತಲುಪಿದಾಗ ಝುನೈದ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ವೈದ್ಯರು ಸಂಜೆ 6.55ಕ್ಕೆ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಸ್ಕೂಟರ್‌ನಲ್ಲಿದ್ದ ಅಫ್ರಾಝ್ ಅವರಿಗೂ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರೂ ಮೃತಪಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಂತಡ್ಕ ಕ್ರಾಸ್‌ನಲ್ಲಿ ಹೊಡೆದಾಟ:

ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಇಸ್ಮಾಯಿಲ್ ಅವರು ಸಹೋದ್ಯೋಗಿ ಅಬ್ಬಾಸ್ ಜತೆ ಬೋಳಿಯಾರಿನ ಅಪಘಾತದ ಸ್ಥಳಕ್ಕೆ ತೆರಳಿದ್ದರು. ಅಲ್ಲಿ KA19-HX-6964 ನೋಂದಣಿ ಸಂಖ್ಯೆಯ ಸ್ಕೂಟರ್ ಜಖಂಗೊಂಡ ಸ್ಥಿತಿಯಲ್ಲಿ ಬಿದ್ದಿತ್ತು. ಸಮೀಪದ ವಿದ್ಯುತ್ ಕಂಬ ತುಂಡಾಗಿತ್ತು. ರಸ್ತೆಯ ಎದುರುಬದಿಯಲ್ಲಿ KA19B6747 ನೋಂದಣಿ ಸಂಖ್ಯೆಯ ಪಿಕಪ್ ವಾಹನ ನಿಂತಿದ್ದು, ಅದರ ಮುಂಭಾಗದ ಬಂಪರ್ ಹಾಗೂ ಮಡ್‌ಗಾರ್ಡ್ ಜಖಂಗೊಂಡಿದ್ದವು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದಾಗ, ರಂತಡ್ಕ ಕ್ರಾಸ್‌ನಲ್ಲಿ ಗಲಾಟೆ ನಡೆದಿರುವುದು ತಿಳಿದುಬಂದಿತ್ತು. ಇಸ್ಮಾಯಿಲ್ ಮತ್ತು ಅಬ್ಬಾಸ್ ಅಲ್ಲಿಗೆ ತೆರಳಿ ಹೋಟೆಲ್ ಮಾಲೀಕರು, ಅಂಗಡಿ ವ್ಯಾಪಾರಿಗಳನ್ನು ವಿಚಾರಿಸಿದ್ದರು. ಅಂದು ಸಂಜೆ ಸುಮಾರು ೪ಕ್ಕೆ ಸ್ಕೂಟರ್‌ನಲ್ಲಿ ಬಂದಿದ್ದ ಝುನೈದ್ ಮತ್ತು ಅಫ್ರಾಝ್ ಹಾಗೂ ಪಿಕಪ್ ಚಾಲಕ ಹಫೀಜ್ ಅಲಿಯಾಸ್ ಅಪ್ಪಿ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು ಎಂದು ಅವರು ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಳಿಕ ಎರಡೂ ಕಡೆಯವರ ನಡುವೆ ತೀವ್ರ ಹೊಡೆದಾಟ ನಡೆದಿತ್ತು. ಗಲಾಟೆಯ ನಂತರ ಝುನೈದ್ ಮತ್ತು ಅಫ್ರಾಝ್ ಸ್ಕೂಟರ್‌ನಲ್ಲಿ ಮುಡಿಪು ಕಡೆಗೆ ತೆರಳಿದ್ದರು. ಇದನ್ನು ಕಂಡ ಹಫೀಜ್ ಪಿಕಪ್ ವಾಹನದಲ್ಲಿ ಅವರನ್ನು ಹಿಂಬಾಲಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಸ್ಕೂಟರ್:

ಇಬ್ಬರನ್ನೂ ಕೊಲೆ ಮಾಡುವ ಉದ್ದೇಶದಿಂದ ಹಫೀಜ್ ಪಿಕಪ್ ವಾಹನದಲ್ಲಿ ಬೆನ್ನಟ್ಟಿ, ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್‌ಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ಇಸ್ಮಾಯಿಲ್ ಆರೋಪಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ್ದು, ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ತೀವ್ರ ರಕ್ತಸ್ರಾವದಿಂದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಘಟನೆ ಬಳಿಕ ಆರೋಪಿ ಪಿಕಪ್ ವಾಹನವನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಯ ಪತ್ತೆಗೆ ತನಿಖೆ:

ಆಸ್ಪತ್ರೆಗೆ ಭೇಟಿ ನೀಡಿ ಮಗನ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ, ಅಪಘಾತದ ಸ್ಥಳ ಹಾಗೂ ರಂತಡ್ಕ ಕ್ರಾಸ್‌ಗೆ ತೆರಳಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿದ್ದ ಇಸ್ಮಾಯಿಲ್ ಅವರು ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿದ್ದ ಸ್ಕೂಟರ್ ಮತ್ತು ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಾಟೆಗೆ ನಿಖರ ಕಾರಣವೇನು ಹಾಗೂ ಪರಾರಿಯಾಗಿರುವ ಆರೋಪಿ ಹಫೀಜ್ ಅಲಿಯಾಸ್ ಅಪ್ಪಿಯನ್ನು ಪತ್ತೆಹಚ್ಚುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article