ಗ್ರಾಮಾಭಿವೃದ್ಧಿ ಯೋಜನೆಗೆ ರಾಷ್ಟ್ರೀಯ ಇಲಾಬೆನ್ ಸ್ಮಾರಕ ಪ್ರಶಸ್ತಿ

ಗ್ರಾಮಾಭಿವೃದ್ಧಿ ಯೋಜನೆಗೆ ರಾಷ್ಟ್ರೀಯ ಇಲಾಬೆನ್ ಸ್ಮಾರಕ ಪ್ರಶಸ್ತಿ


ಉಜಿರೆ: ಭಾರತೀಯ ರಿಸರ್ವ್ ಬ್ಯಾಂಕ್ ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾದ ಸಾಧನ್ ಸಂಸ್ಥೆಯು ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ 21ನೇ ರಾಷ್ಟ್ರೀಯ ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ಗೆ ‘2025-2026ರ ಸಾಲಿನ ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ-ಇಲಾಬೆನ್ ಸ್ಮಾರಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.


ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯು ಮಹಿಳಾ ಕಾರ್ಯಕರ್ತರಿಗೆ ಅತೀ ಸುರಕ್ಷಿತ ಕಾರ್ಯಸ್ಥಳ ಮತ್ತು ಉತ್ತಮ ಬಾಂಧವ್ಯದ ವಾತಾವರಣವನ್ನು ನೀಡುವ ಮೂಲಕ ದೇಶಕ್ಕೆ ಮಾದರಿಯಾದ ಒಂದು ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. 

ಈ ಪ್ರಶಸ್ತಿಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆರ್. ಪೈ, ಪ್ರಾದೇಶಿಕ ನಿರ್ದೇಶಕರುಗಳಾದ ಗೀತಾ ಬಿ. ಮತ್ತು ದಯಾಶೀಲ ಅವರು ಸ್ವೀಕರಿಸಿದರು.

ಸಾಧನ್ ಸಂಸ್ಥೆಯು ದೇಶದ 210 ಆರ್ಥಿಕ ಸಂಸ್ಥೆಗಳ ನೋಂದಾವಣೆಯನ್ನು ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾಗಿದ್ದು, ಇದು ಬ್ಯಾಂಕ್‌ಗಳು, ಬ್ಯಾಂಕಿನ ಬಿ.ಸಿ. ಪ್ರತಿನಿಧಿ ಸಂಸ್ಥೆಗಳು, ಎಂಬಿಎಫ್‌ಸಿ, ಕಿರು ಫೈನಾನ್ಸಿಯಲ್ ಬ್ಯಾಂಕ್, ಕಿರು ಆರ್ಥಿಕ ಸಂಸ್ಥೆಗಳು, ಕೋ ಆಪರೇಟಿವ್ ಸೊಸೈಟಿಗಳನ್ನು ಸದಸ್ಯರನ್ನಾಗಿ ಹೊಂದಿದೆ.

ಇಲಾಬೆನ್‌ರವರು ಮಹಿಳಾ ಸಬಲೀಕರಣದಲ್ಲಿ ದೇಶಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದೊಂದು ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಕಿರು ಆರ್ಥಿಕ ವಲಯದ ಪ್ರಶಸ್ತಿಯಾಗಿರುತ್ತದೆ.

ಗ್ರಾಮಾಭಿವೃದ್ಧಿ ಯೋಜನೆಯ ಒಟ್ಟು 41 ಸಾವಿರ ಕಾರ್ಯಕರ್ತರಲ್ಲಿ 29 ಸಾವಿರ ಮಂದಿ ಮಹಿಳಾ ಕಾರ್ಯಕರ್ತರಿದ್ದು ಅವರುಗಳಿಗೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಕಾರ್ಯಕರ್ತರಿಗೆ ಅತ್ಯುತ್ತಮ ತಂತ್ರಜ್ಞಾನವನ್ನು ವ್ಯವಸ್ಥೆಗೊಳಿಸಲಾಗಿದೆ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಬೇಕಾದ ತರಬೇತಿಯನ್ನು ಆಗಾಗ ನೀಡಲಾಗುತ್ತಿದೆ. ಉನ್ನತ ಆಡಳಿತ ನಿರ್ವಹಣೆ ಹಾಗೆಯೆ ಧನಾತ್ಮಕ ವಾತಾವರಣದ ಮೂಲಕ ದಿನನಿತ್ಯದ ಕಾರ್ಯಚಟುವಟಿಕೆಗಳು ಅತ್ಯಂತ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಅವಕಾಶವನ್ನು ಕಲ್ಪಿಸಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿಯೂ ಮಹಿಳಾ ಕಾರ್ಯಕರ್ತರಿಗೆ ನೇರವಾಗಿ ಅವರ ಕುಟುಂಬ ಮುಖ್ಯವಾಗಿ ‘ಸ್ಪೇಸ್ ಜಾಯಿನಿಂಗ್’ ಆಧಾರದ ಮೇಲೆ ಅವರಿಗೆ ಸೂಕ್ತವಾಗುವ ಪ್ರದೇಶಗಳಿಗೆ ವರ್ಗಾವಣೆಯನ್ನು ಮಾಡಲಾಗುತ್ತಿದೆ. ಪಾರದರ್ಶಕವಾಗಿ ಭಡ್ತಿ ಪ್ರಕ್ರಿಯೆಗಳ ಮೂಲಕ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವುದರೊಂದಿಗೆ ಅವರ ಪ್ರಗತಿಗೂ ಮುಕ್ತ ಅವಕಾಶವನ್ನು ನೀಡಲಾಗಿದೆ.

ಪಿಒಎಸ್‌ಹೆಚ್ ಕಾಯಿದೆಯ ಬಗ್ಗೆ ಆಯ್ದ ಪ್ರಮುಖ ಮಹಿಳಾ ಕಾರ್ಯಕರ್ತರಿಗೆ ವಿಶೇಷ ತರಬೇತಿಯನ್ನು ನೀಡಿ ರಾಜ್ಯದಾದ್ಯಂತ ಮಹಿಳೆಯರ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಮಹಿಳಾ ಕಾರ್ಯಕರ್ತರ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದ್ದಲ್ಲದೆ ಉಲ್ಲಂಘನೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಸಂಸ್ಥೆಯು ಹೊಂದಿದೆ.

ಮಹಿಳಾ ಕಾರ್ಯಕರ್ತರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಹೇಮಾವತಿ ಹೆಗ್ಗಡೆಯವರು ಪೌಷ್ಟಿಕ ಆಹಾರ, ಆರೋಗ್ಯದ ಅರಿವು, ವೈದ್ಯಕೀಯ ಶಿಬಿರಗಳು ಇತ್ಯಾದಿಗಳ ಮೂಲಕ ಕಾರ್ಯಕರ್ತರ ಆರೋಗ್ಯದ ವಿಶೇಷ ಕಾಳಜಿಯನ್ನು ವಹಿಸುತ್ತಿದ್ದಾರೆ. ಕಾರ್ಯಕರ್ತರಿಗೆ ವಾರ್ಷಿಕ ಸುಮಾರು ರೂ. 5 ಲಕ್ಷ ಮೌಲ್ಯದ ಆರೋಗ್ಯ ವಿಮಾ ಸೌಲಭ್ಯವನ್ನು ನೀಡಲಾಗಿದೆ. ಮಹಿಳಾ ಕಾರ್ಯಕರ್ತರಿಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಡುವುದು, ಉತ್ತಮ ಬಾಂಧವ್ಯದ ವಾತಾವರಣವನ್ನು ಸೃಷ್ಟಿಸುವುದು. ಉತ್ತಮ ನಾಯಕತ್ವವನ್ನು ವಹಿಸಲು ಅವಕಾಶ ಮಾಡಿಕೊಡುವುದರೊಂದಿಗೆ ಒಂದು ಸಂಸ್ಥೆಯು ಅನೇಕ ಮೌಲ್ಯವರ್ಧನೆಗಳೊಂದಿಗೆ ಉತ್ತಮ ವ್ಯವಸ್ಥೆಯನ್ನು ಹೊಂದಿರುವುದು ಒಂದು ರೀತಿಯಲ್ಲಿ ದೇಶಕ್ಕೆ ಮಾದರಿಯಾಗಿದೆ.

ಹೇಮಾವತಿ ವೀ.ಹೆಗ್ಗಡೆ ಅವರ ಮಾರ್ಗದರ್ಶನದಂತೆ ಪ್ರಸ್ತುತ 6,547 ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಮೂಲಕ 3,29,609 ಸದಸ್ಯರು ಸರ್ವಾಂಗೀಣ ಅಭಿವೃದ್ಧಿ ಹೊಂದಿದ್ದಾರೆ. ಹಾಗೆಯೇ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಸೇವೆಯ ಮೂಲಕ ಸುಮಾರು 42 ಲಕ್ಷ ಮಹಿಳೆಯರು ಬ್ಯಾಂಕಿನಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ಸಾಲ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿರುವುದಲ್ಲದೇ ಸಾಮಾಜಿಕವಾಗಿಯೂ ಅಭಿವೃದ್ಧಿಗೊಂಡು ನಿಜವಾದ ಅರ್ಥದಲ್ಲಿ ನಾರಿಶಕ್ತಿಗಳಾಗಿದ್ದಾರೆ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆಯ ಎಲ್ಲಾ ಸಾಧನೆಗಳ ಹಿಂದೆ ಮಹಿಳಾ ಕಾರ್ಯಕರ್ತರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಹಾಗೆಯೇ ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವ ಮತ್ತು ಸಂಸ್ಕೃತಿಗಳ ಪ್ರತಿಬಿಂಬವಾಗಿದ್ದಾರೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಅವರು ಉಲ್ಲೇಖಿಸಿ ಅವರನ್ನು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article