ಉಜಿರೆ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್‌ನಿಂದ ಬೃಹತ್ ಜಾಗೃತಿ ಜಾಥಾ ಕಾರ್ಯಕ್ರಮ
ಕಾರ್ಯಕ್ರಮದ ಮುಖ್ಯ ಅತಿಥಿ ಬೆಳ್ತಂಗಡಿಯ ಪೊಲೀಸ್ ಉಪನಿರೀಕ್ಷಕ ನಿಂಗಪ್ಪ ಜಕ್ಕಣ್ಣವರ್ ಮಾತನಾಡಿ, ರಸ್ತೆ ಸುರಕ್ಷತೆಯ ಮಹತ್ವ, ಸಂಚಾರ ನಿಯಮಗಳ ಪಾಲನೆ ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಕುರಿತು ಮಾತನಾಡಿದರು. ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಬಳಸುವುದು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಎಚ್‌ಐವಿ ಮತ್ತು ಏಡ್ಸ್ ತಡೆಗಟ್ಟುವಿಕೆಯ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನವನ್ನು ನಡೆಸುವ ಅಗತ್ಯವನ್ನು ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳು ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರ ಜೊತೆಗೆ ಸುರಕ್ಷಿತ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಸಂಚಾರ ನಿಯಮಗಳ ನಿರ್ಲಕ್ಷ್ಯದಿಂದ ಅನೇಕ ಅಪಘಾತಗಳು ಸಂಭವಿಸುತ್ತವೆ ಎಂದ ಅವರು ಯುವಜನರು ಮಾದಕ ವ್ಯಸನಗಳಿಂದ ದೂರವಿದ್ದು, ತಮ್ಮ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಕಾಲೇಜಿನ ಎನ್‌ಎಸ್‌ಎಸ್ ಸ್ವಯಮಸೇವಕರು ಬೃಹತ್ ಜಾಥಾದಲ್ಲಿ ಭಾಗವಹಿಸಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ, ಹೆಚ್‌ಐವಿ ಮತ್ತು ನಶಾಮುಕ್ತ ಭಾರತದ ಕುರಿತು ಜಾಗೃತಿ ಮೂಡಿಸಿದರು.
ಜಾಥಾವು ಡಿ.ಎಡ್. ಕಾಲೇಜಿನ ಆವರಣದಿಂದ ಆರಂಭವಾಗಿ, ಉಜಿರೆಯ ಕಾಲೇಜು ರಸ್ತೆ ಮೂಲಕ ಮುಖ್ಯ ರಸ್ತೆಯಲ್ಲಿ ವೃತ್ತದವರೆಗೆ ಸಾಗಿ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ಕೊನೆಗೊಂಡಿತು. ಸ್ವಯಂಸೇವಕರು ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಎನ್‌ಎಸ್‌ಎಸ್‌ನ ಹಿರಿಯ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಯೋಜನಾಧಿಕಾರಿಗಳಾದ ಡಾ. ಮಾಲಿನಿ ಅಂಚನ್, ಡಾ. ಸುಧೀರ್ ಕೆ.ವಿ. ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ವಯಂಸೇವಕಿ ತೀರ್ಥ ನಿರೂಪಿಸಿದರು. ಡಾ. ಸುಧೀರ್ ಕೆ.ವಿ. ಸ್ವಾಗತಿಸಿ, ಡಾ. ಮಾಲಿನಿ ಅಂಚನ್ ವಂದಿಸಿದರು.