ಉಳ್ಳಾಲ: ನಾವು ಎಸ್ಐಆರ್ ವಿರುದ್ಧ ಹೋಗಿಲ್ಲ, ಆದರೆ ಎಸ್ಐಆರ್ ಅನ್ನು ಗುರಾಣಿಯಾಗಿ ಬಳಸಿ ಜನಸಾಮಾನ್ಯರು ಅದರಲ್ಲೂ ಕಾಂಗ್ರೆಸ್ ಮತದಾರರನ್ನು ನೋಡಿ ಅವರ ಮತ ರದ್ದುಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ಸಂವಿಂಧಾನದ ಕಗ್ಗೊಲೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಎಸ್ಐಆರ್ ವಿರುದ್ಧ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ನಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಂಗಳೂರು ವಿದಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜನತಂತ್ರದ ರಕ್ಷಣೆಗಾಗಿ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಆರಂಭಗೊಂಡ ಅಹೋರಾತ್ರಿ ಧರಣಿಯ ಶನಿವಾರ ಬೆಳಗ್ಗೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಎಸ್ಐಆರ್ ಪ್ರಕ್ರಿಯೆಗೆ ನಾವು ಕೂಡ ಬೆಂಬಲ ನೀಡಿದ್ದೇವೆ. ಅರ್ಹ ಮತದಾರರಿಗೆ ಮತದಾನದ ಹಕ್ಕು ಸಿಗಬೇಕೆಂಬುವುದೇ ಕಾಂಗ್ರೆಸ್ಸಿನ ತತ್ವ ಆದರ್ಶವಾಗಿದೆ. ಆದರೆ ಅರ್ಹ ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕವೂ ಆ ಪಟ್ಟಿಯಲ್ಲಿರುವ ಹೆಸರುಗಳನ್ನ ರದ್ದುಗೊಳಿಸಲು ಅರ್ಜಿ ಸಲ್ಲಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಒಬ್ಬೊಬ್ಬರು ಬಂದು ನೂರು ಅರ್ಜಿಗಳನ್ನು ನೀಡುತ್ತಾರೆ. ಅದರಲ್ಲಿ ರದ್ದುಗೊಳಿಸಬೇಕಾದ ಹೆಸರುಗಳ ಫೋನ್ ನಂಬರ್, ಎಪಿಕ್ ನಂಬರ್, ಫೋಟೊ, ಆಧಾರ್ ನಂಬರ್ಗಳು ಕಂಪ್ಯೂಟರಲ್ಲಿ ಫ್ರಿಂಟ್ ಆಗಿ ಬರುತ್ತದೆ. ಬೇರೊಬ್ಬ ಮತದಾರರ ಡೇಟಾ, ದಾಖಲೆಗಳ ಮಾಹಿತಿಗಳನ್ನು ಯಾರು ಕೊಡುತ್ತಾರೆ, ಇದನ್ನು ಎಲ್ಲಿ ಫ್ರಿಂಟ್ ಮಾಡ್ತಾರೆ, ಯಾರು ಮಾಡುತ್ತಾರೆ ಎನ್ನುವುದನ್ನೇ ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಈ ರಹಸ್ಯವನ್ನು ಚುನಾವಣಾ ಆಯೋಗ ಏಕೆ ಬಹಿರಂಗ ಪಡಿಸಲ್ಲ. ಇದಕ್ಕಾಗಿಯೇ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಸಂಶಯ ವ್ಯಕ್ತಪಡಿಸುತ್ತಿದೆ. ಇದನ್ನು ಪ್ರಶ್ನಿಸಿದವರ ಮೇಲೆಯೇ ಇಲ್ಲಸಲ್ಲದ ಕೇಸ್ ಹಾಕಿ ತನಿಖೆಗೊಳಪಡಿಸಲಾಗುತ್ತಿದೆ. ಜೀವಂತವಾಗಿರುವವರ ಮತ ರದ್ಧತಿಗೆ ನಿಮಗೆ ಹಕ್ಕು ಯಾರು ಕೊಟ್ಟಿದ್ದೆಂದು ಖಾದರ್ ಪ್ರಶ್ನಿಸಿದರು.
ಕೇಂದ್ರ ಚುನಾವಣಾ ಆಯೋಗದ ಸದಸ್ಯರೇ ಚುನಾವಣಾ ಸಂದರ್ಭದಲ್ಲಿ ಮತದಾರರ ಹೆಸರುಗಳನ್ನು ರದ್ದು ಪಡಿಸುವುದು ಸರಿಯಲ್ಲವೆಂದು ಆಯೋಗದ ಮುಖ್ಯಸ್ಥ ಜ್ನಾನೇಶ್ ಅವರಿಗೆ ಹನ್ನೆರಡು ಸಲ ಪತ್ರ ಬರೆಯುತ್ತಾರಲ್ಲದೆ,ಅವರು ಬಹಿರಂಗವಾಗಿ ಪತ್ರಿಕಾಗೋಷ್ಟಿ ನಡೆಸಿದ ಪರಿಣಾಮ ನಾವು ಇವತ್ತು ಜ್ನಾನೇಶ್ ಅವರ ರಾಜೀನಾಮೆ ಕೇಳುವುದರಲ್ಲಿ ತಪ್ಪೇನಿದೆಯೆಂದರು.
ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಆಯೋಗದ ಇಬ್ಬರು ಸದಸ್ಯರೇ ಅಪನಂಬಿಕೆ ವ್ಯಕ್ತಪಡಿಸಿದಾಗ ಅವರನ್ನು ಅದೇ ಸೀಟಲ್ಲಿ ಕೂರಿಸಲು ಕೇಂದ್ರ ಸರಕಾರ ಮತ್ತು ಬಿಜೆಪಿಗೆ ಯಾಕಿಷ್ಟು ಆಸಕ್ತಿಯೆಂದು ಪ್ರಶ್ನಿಸಿದರು.ಎಸ್ ಐಆರ್ ವಿರುದ್ಧ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಉಳ್ಳಾಲ ವಿದಾನಸಭಾ ಕ್ಷೇತ್ರದಿಂದಲೇ ವ್ಯಾಪಿಸಲಿಯೆಂದರು.
ಮಂಗಳೂರು ವಿದಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಾಝ್ ನರಿಂಗಾನ, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ಬಂಡಿಕೊಟ್ಯ, ಎನ್ಎಸ್ಯುಐ ಅಧ್ಯಕ್ಷ ಶಾಹಿಲ್, ರವೂಫ್ ಸಿ.ಎಂ. ದೇರಳಕಟ್ಟೆ, ಸತ್ತಾರ್ ಸಿ.ಎಂ. ದೇರಳಕಟ್ಟೆ, ಫಿರೋಝ್ ಮಲಾರ್, ಮನ್ಸೂರ್ ಮಂಚಿಲ, ಆಸೀಫ್ ಮಂಜನಾಡಿ, ರಝಾಕ್ ಕುಕ್ಕಾಜೆ, ಕಾವ್ಯ, ಯು.ಟಿ. ಫರೀದ್, ರಫೀಕ್ ಅಂಬ್ಲಮೊಗರು, ಸಫ್ವಾನ್ ಕೆರೆಬೈಲ್, ರಶೀದ್ ಕೋಡಿ, ರಿಯಾಝ್ ಪಾವೂರು, ಝಕರಿಯಾ ಮಲಾರ್, ಯೂಸುಫ್ ಉಳ್ಳಾಲ, ರಝಿಯಾ ಇಬ್ರಾಹಿಂ, ಸುರಯ್ಯ ಅಂಜುಮ್ ಮತ್ತಿತರರು ಉಪಸ್ಥಿತರಿದ್ದರು.