ಲಾರಿಯಿಂದ ಬ್ಯಾಟರಿ ಕಳವಿಗೆ ಯತ್ನ
ಬಂಟ್ವಾಳ: ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿ ಮನೆ ಬಳಿ ನಿಲ್ಲಿಸಿದ್ದ ಲಾರಿಯ ಬ್ಯಾಟರಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.
ಈ ಬಗ್ಗೆ ತಾಳಿಪಡ್ಡು ನಿವಾಸಿ ಮಹಮ್ಮದ್ ಶರೀಫ್ (40) ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ಇವರು ಮಾಲಕ ಅಕ್ಟರ್ ಅಲಿ ಅವರ ಲಾರಿಯಲ್ಲಿ ಚಾಲಕನಾಗಿದ್ದು, ನ .12 ರಂದು ಕೆಲಸ ಮುಗಿಸಿ ರಾತ್ರಿ 10 ಗಂಟೆ ವೇಳೆಗೆ ಬಿ. ಮೂಡ ಗ್ರಾಮದ ಪೊನ್ನೋಡಿ ಉಸ್ಮಾನ್ ಅವರ ಮನೆಯ ಸಮೀಪ ರಸ್ತೆಯ ಬದಿಯಲ್ಲಿ ಲಾರಿ ನಿಲ್ಲಿಸಿ ತಮ್ಮ ಮನೆಯಾದ ತಾಳಿಪಡ್ಪುಗೆ ಹೋಗಿದ್ದಾರೆ.
ನ.13 ರಂದು ಮುಂಜಾನೆ ಪರಿಚಯಸ್ಥ ಹುಸೈನ್ ಎಂಬವರು ಕರೆ ಮಾಡಿ ನಿಮ್ಮ ಲಾರಿಯ ಹತ್ತಿರ ಯಾರೋ ಇರುವುದಾಗಿ ತಿಳಿಸಿದ್ದು,ತಕ್ಷಣ ಶರೀಫ್ ಅವರು ಬೈಕಿನಲ್ಲಿ ಲಾರಿ ಬಳಿ ಬಂದಾಗ ಲಾರಿಯ ಬ್ಯಾಟರಿಯನ್ನು ಯಾರೋ ಕಳ್ಳರು ಕಳಚಿ, ಸ್ಕೂಟರ್ ವೊಂದರ ಸಮೀಪ ಇಟ್ಟಿದ್ದರು. ಶರೀಫ್ ಅವರು ಬರುವುದನ್ನು ಗಮನಿಸಿದ ಆರೋಪಿ ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.