ವೃದ್ಧೆಯ ಸರ ಕಸಿದು ಪರಾರಿ
ಬಂಟ್ವಾಳ: ದಾರಿ ಕೇಳುವ ನೆಪದಲ್ಲಿ ಅಪರಿಚಿತ ಬೈಕ್ ಸವಾರರಿಬ್ಬರು ಬಂಟ್ವಾಳ ತಾಲೂಕಿನ ಸೂರಿಕುಮೇರುವಿನ ಕಾಯರಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧಯೋರ್ವರ ಕತ್ತಿನಿಂದ ಸರವನ್ನು ಕಸಿದು ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಬರಿಮಾರು ರಸ್ತೆಯಲ್ಲಿ ಬೈಕ್‌ನಲ್ಲಿ ಬಂದಿದ್ದ ಬೈಕ್ ಸವಾರರಿಬ್ಬರು ಮುಖಕ್ಕೆ ಮಾಸ್ಕ್ ಧರಿಸಿದ್ದು, ದಾರಿ ಕೇಳುವ ನೆಪದಲ್ಲಿ ವೃದ್ಧೆಯ ಬಳಿಗಾಗಮಿಸಿ ಕ್ಷಣಾರ್ಧದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದು ಅದೇ ರಸ್ತೆಯ ಮೂಲಕ ಪರಾರಿಯಾಗಿದ್ದಾರೆನ್ನಲಾಗಿದೆ.
ಕೃತ್ಯದ ಬಳಿಕ ಆರೋಪಿಗಳು ಬಿ.ಸಿ.ರೋಡ್, ಮಂಗಳೂರು ಹಾಗೂ ಉಪ್ಪಿನಂಗಡಿ ಭಾಗಗಳಿಗೆ ಸಂಪರ್ಕಿಸುವ ಬರಿಮಾರು ರಸ್ತೆಯಾಗಿದ್ದು, ಯಾವ ದಿಕ್ಕಿನಲ್ಲಿ ತೆರಳಿದ್ದಾರೆ ಎಂಬುದು ಸ್ಪಷ್ಟತೆ ಇಲ್ಲ.
ಘಟನೆಯ ದೃಶ್ಯ ಸಮೀಪದಲ್ಲಿರುವ ಕಟ್ಟಡವೊಂದರ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ. ಹಾಡಹಗಲೇ ನಡೆದ ಈ ಕೃತ್ಯದಿಂದ ಸ್ಥಳೀಯರಲ್ಲಿ ಆತಂಕಕ್ಕೊಳಗಾಗಿದ್ದಾರೆ.
ವೃದ್ಧೆಯ ಕುತ್ತಿಗೆಯಿಂದ ಆರೋಪಿಗಳು ಕಸಿದ ಸರವು ಅಸಲಿಯಾ, ನಕಲಿಯಾ ಎಂಬ ಕುರಿತು ಅನುಮಾನಗಳಿವೆಯೆನ್ನಲಾಗಿದೆ.