ಕುಂದಾಪುರ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಕುಂದಾಪುರ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ


ಕುಂದಾಪುರ: ಕೋಟೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿನ ವಕ್ವಾಡಿ ದಿ. ಹಿರಿಯಣ್ಣ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ನಡೆದ 21ನೇ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ, ನ್ಯಾಯವಾದಿ ಎಎಸ್‌ಎನ್ ಹೆಬ್ಬಾರ್ ಅವರು ದೀಪ ಬೆಳಗಿ, ಭುವನೇಶ್ವರಿ ದೇವಿ ಪೂಜೆಗೈದು ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ಅಚ್ಚ ಕನ್ನಡದ ಸ್ವಚ್ಛ ಊರು ಕುಂದಾಪುರ. ಎಲ್ಲ ಕ್ಷೇತ್ರಗಳಲ್ಲೂ ವಿಶ್ವಖ್ಯಾತಿ ಹೊಂದಿರುವ ಈ ಪುಟ್ಟ ಊರು ಕನ್ನಡ ಸಾಹಿತ್ಯದ ತವರೂರು. ಕನ್ನಡದ ಮೊದಲ ಕಾದಂಬರಿ ಬರೆದವರು ಕುಂದಾಪುರದವರು. ಅಚ್ಚ ಕನ್ನಡದ ಸಂತ ವಾದಿರಾಜ ಗುರುಗಳ ಜನ್ಮ ಕ್ಷೇತ್ರ ಹೂವಿನಕೆರೆ ಇಲ್ಲೇ ಇದೆ. ಕನ್ನಡ, ಕುಂದಗನ್ನಡ, ತುಳು, ಸಂಸ್ಕೃತಗಳಲ್ಲಿ ಸಾಹಿತ್ಯ ಕೃತಿ ರಚಿಸಿದವರು ಅವರು. ಅವರ ಲಕ್ಷ್ಮೀ ಶೋಭಾನೆ ಹಾಡು ಪ್ರತಿ ಮನೆ, ಪ್ರತಿ ಸಮಾರಂಭಗಳಲ್ಲೂ ಅನುರಣಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಮುಂದಿನ ಸಾಹಿತ್ಯ ಸಮ್ಮೇಳನವನ್ನು ಹೂವಿನಕೆರೆಯಲ್ಲೇ ನಡೆಸಬೇಕು ಎಂದು ಕರೆನೀಡಿದರು. 

ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಅಭಿವೃದ್ಧಿಗೆ ಸಂಜೀವಿನಿಯಾಗಿ ಸಹಕರಿಸುತ್ತದೆ. ನೂರಾರು ಪ್ರತಿಭೆಗಳಿಗೆ ವೇದಿಕೆ ಒದಗಿಸಬಲ್ಲ ಸಮ್ಮೇಳನಗಳು ಸಾಹಿತ್ಯಾಸಕ್ತರಿಗೂ ಮುದ ನೀಡುತ್ತವೆ. ಆದ್ದರಿಂದ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದವರು ಹೇಳಿದರು. 

ಕಸಾಪ ಕುಂದಾಪುರ ಘಟಕಾಧ್ಯಕ್ಷ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮ್ಮೇಳನಗಳ ಹಿನ್ನೋಟ ಪರಿಚಯ ನೀಡಿದರು. ಗೌರವ ಕಾರ್ಯದರ್ಶಿ ಸುಬ್ರಹ್ಮಣ ಶೆಟ್ಟಿ ಆಶಯ ನುಡಿಗಳನ್ನಾಡಿದರು. 

ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ಎನ್. ಭಾಸ್ಕರ ಆಚಾರ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ಸಾಹಿತ್ಯ ಸಮ್ಮೇಳನಗಳು, ಹೊಸ ಪುಸ್ತಕಗಳ ಬಿಡುಗಡೆ ಇತ್ಯಾದಿ ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಿವೆ. ಕನ್ನಡಕ್ಕಿದು ಉಚ್ಛ್ರಾಯ ಕಾಲ ಎಂದು ಬಣ್ಣಿಸಿದರು.

ಸಾಹಿತ್ಯವೆಂದರೆ ಬರೀ ಓದು ಬರಹ ಮಾತ್ರವಲ್ಲ. ಜೀವನವನ್ನು ಕಟ್ಟಿಕೊಳ್ಳಲು ಬೇಕಾಗುವ ಪ್ರತಿಯೊಂದು ಕೆಲಸಕ್ಕೂ ವ್ಯವಸ್ಥೆಗೂ ಅಂತರ್ಗತವಾದ ಸಾಹಿತ್ಯವೊಂದು ಇದ್ದೇ ಇದೆ ಎಂದು ವಿವರಿಸಿದರು. 

ಶಾಸಕ ಕಿರಣ್ ಕುಮಾರ್ ಕೊಡ್ಗಿ ಶುಭಹಾರೈಸಿದರು. 

ಉದ್ಘಾಟನಾ ಪೂರ್ವದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಭವ್ಯ ಪುರಮೆರವಣಿಗೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಡಾ. ಎನ್. ಭಾಸ್ಕರ ಆಚಾರ್ಯ ಮತ್ತು ಡಾ. ಸಬಿತಾ ಆಚಾರ್ಯ ದಂಪತಿಯನ್ನು ಸಮ್ಮೇಳನಾಂಗಳಕ್ಕೆ ಕರೆತರಲಾಯಿತು. ಕೋಟೇಶ್ವರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುನಿಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರೆ, ದೇವಾಲಯ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಪುರಮೆರವಣಿಗೆಗೆ ಚಾಲನೆ ನೀಡಿದರು. 

ಹಿರಿಯ ಸಾಂಸ್ಕೃತಿಕ ಚಿಂತಕ ಗೋಪಾಲಕೃಷ್ಣ ಕುಂಭಾಸಿ ಸಮ್ಮೇಳನಾಧ್ಯಕ್ಷರ ಪರಿಚಯ ನೀಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪತ್ರಕರ್ತ ಯು ಸುರೇಂದ್ರ ಶೆಣೈ, ಶಾಲಾ ಮುಖ್ಯೋಪಾಧ್ಯಾಯ ಹಿರಿಯಣ್ಣ ನಾಯ್ಕ, ಸಮಾಜಪರ ಚಿಂತಕ ಶಂಕರ್ ನಾಯ್ಕ್, ಸ್ವಾಗತ ಸಮಿತಿ ಅಧ್ಯಕ್ಷ ಗಜೇಂದ್ರ ಶೆಟ್ಟಿ, ಕಾರ್ಯದರ್ಶಿ ರತ್ನಾಕರ ನಾಯಕ್, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಎನ್ ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿಣಿ ಶೋಭಾ ಎಸ್ ಶೆಟ್ಟಿ, ಕೆಪಿಎಸ್ ಪ್ರಾಶುಪಾಲ ಪ್ರಕಾಶ್ ಶೆಟ್ಟಿ, ಕಾಪು ಕ.ಸಾ.ಪ. ಅಧ್ಯಕ್ಷ ಪುಂಡಲೀಕ ಮರಾಟೆ, ಲೆಕ್ಕಪರಿಶೋಧಕ ಶಂಕರ್ ನಾಯಕ್, ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ನಾಯಕ್, ಧರ್ಮಸ್ಥಳ ಗ್ರಾ.ಯೋ. ಅಧಿಕಾರಿ ಸುಧೀರ್, ಕೋಟೇಶ್ವರ ರೋಟರಿ ಅಧ್ಯಕ್ಷೆ ಅಕ್ಷತಾ ಐತಾಳ್, ರೋಟರಿ  ಗ್ರಾಮೀಣ ದಳ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್, ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article