ಮಾಬುಕಳ ಹೊಳೆಗೆ ಹಾರಿ ದಂಪತಿ ಆತ್ಮಹತ್ಯೆ
ಕುಂದಾಪುರ: ಪತಿ-ಪತ್ನಿ ಜೋಡಿಯೊಂದು ಕೈಗಳನ್ನು ಪರಸ್ಪರ ಚೂಡಿದಾರದ ಶಾಲಿನಿಂದ ಕಟ್ಟಿಕೊಂಡು ಬ್ರಹ್ಮಾವರ ತಾಲೂಕು ಮಾಬುಕಳದ ಸೀತಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಮೂಲತಃ ತುಮಕೂರು ಜಿಲ್ಲೆಯವರಾದ ಶ್ರೀನಿವಾಸ್ ಮೂರ್ತಿ ಎಚ್. (52) ಹಾಗೂ ಗಂಗಾ (48) ಎಂದು ಗುರುತಿಸಲಾಗಿದೆ.
ದಂಪತಿ ಒಂದು ವಾರದ ಹಿಂದೆ ಕರಾವಳಿ ಹಾಗೂ ಮಲೆನಾಡು ಭಾಗದ ವಿವಿಧ ತೀರ್ಥಕ್ಷೇತ್ರಗಳ ದರ್ಶನಕ್ಕಾಗಿ ಆಗಮಿಸಿದ್ದರು ಎನ್ನಲಾಗಿದೆ. ಶನಿವಾರ ಮುರ್ಡೇಶ್ವರಕ್ಕೆ ಭೇಟಿ ನೀಡಿದ್ದ ಅವರು, ಬಳಿಕ ಸಂಜೆ ವೇಳೆಗೆ ಮಾಬುಕಳ ಪರಿಸರದಲ್ಲಿ ಸುತ್ತಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಇಬ್ಬರೂ ಪರಸ್ಪರ ಕೈ ಕಟ್ಟಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಾಬುಕಳ ಸೇತುವೆಯಿಂದ ಸೀತಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿ ನದಿಗೆ ಹಾರಿರುವುದನ್ನು ಗಮನಿಸಿದ ರಿಕ್ಷಾ ಚಾಲಕರೊಬ್ಬರು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಶೀಲಿಸುವಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಾತ್ರಿ ವೇಳೆ ಶೋಧ ಕಾರ್ಯಾಚರಣೆ ನಡೆಸಿದರೂ ಜೋಡಿಯ ಪತ್ತೆಯಾಗಿರಲಿಲ್ಲ.
ಭಾನುವಾರ ಬೆಳಿಗ್ಗೆ ಮಾಬುಕಳ ಸೇತುವೆಯಿಂದ ಸುಮಾರು 500 ಮೀಟರ್ ದೂರದ ಪಾಂಡೇಶ್ವರದ ಸೀತಾ ನದಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಚೂಡಿದಾರದ ಶಾಲಿನಿಂದ ತಮ್ಮ ಕೈಗಳನ್ನು ಪರಸ್ಪರ ಕಟ್ಟಿಕೊಂಡಿದ್ದ ಸ್ಥಿತಿಯಲ್ಲೇ ಇಬ್ಬರ ಮೃತದೇಹಗಳು ಪತ್ತೆಯಾಗಿರುವುದು ಘಟನೆಯ ದಾರುಣತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆದಿದೆ. ಮೃತ ದೇಹಗಳನ್ನು ಕುಂದಾಪುರ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ.