ಸೌಜನ್ಯ ಪ್ರಕರಣ: 14 ವರ್ಷ ಹಿಂದೆ ಸಂಗ್ರಹಿಸಿದ್ದ ವೈದ್ಯಕೀಯ ಮಾದರಿ ಮತ್ತೆ ವೈಜ್ಞಾನಿಕ ಪರೀಕ್ಷೆಗೆ
ಮಂಗಳೂರು: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದ್ದು, 14 ವರ್ಷಗಳ ಹಿಂದೆ ಸಂಗ್ರಹಿಸಲಾಗಿದ್ದ ವೈದ್ಯಕೀಯ ಮಾದರಿಯನ್ನು ಮತ್ತೆ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಡಿಎನ್‌ಎ ಪರೀಕ್ಷೆಯಿಂದ ಆರೋಪಿಗಳ ಕುರಿತು ಸುಳಿವು ನೀಡಬಲ್ಲ ಸಾಕ್ಷ್ಯ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಎಸ್‌ಐಟಿ ಇದೆ.
2012ರ ಅ.10ರಂದು ಬೆಳ್ತಂಗಡಿ ಠಾಣೆ ಪೊಲೀಸರು ಸೌಜನ್ಯಾಳ ಮರಣೋತ್ತರ ಪರೀಕ್ಷೆಗೂ ಮುನ್ನ ಗುಪ್ತಾಂಗದಿಂದ ಮಾದರಿ (ವೆಜಿನಲ್ ಸ್ವ್ಯಾಬ್) ಸಂಗ್ರಹಿಸಿದ್ದರು. ಅ.20ರಂದು ಈ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಂದಿನ ಪರೀಕ್ಷೆಯಲ್ಲಿ ಇದರಲ್ಲಿ ಫಂಗಸ್ ಪತ್ತೆಯಾಗಿರುವುದಾಗಿ ವರದಿ ಬಂದಿತ್ತು.
ಆದರೆ ಈಗ ಅದೇ ಹಳೆಯ ಮಾದರಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪ್ರಯೋಗಾಲಯಕ್ಕೆ ಮರು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಹೈದರಾಬಾದ್‌ನ ವಿಶೇಷ ಪ್ರಯೋಗಾಲಯದಲ್ಲಿ ಇದನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದೆ. ವಿಶೇಷವೆಂದರೆ, ಈ ಮಾದರಿಯಲ್ಲಿ ಫಂಗಸ್ ಇದ್ದರೂ ಅದರಲ್ಲಿರುವ ಡಿಎನ್‌ಎ ಅಂಶಗಳನ್ನು ಪತ್ತೆಹಚ್ಚಲು ಸಾಧ್ಯ. ಹೀಗಾಗಿ ೧೪ ವರ್ಷಗಳ ಹಿಂದಿನ ಮಾದರಿಯಿಂದಲೂ ಮಹತ್ವದ ಸುಳಿವು ಸಿಗಬಹುದೆಂಬ ನಿರೀಕ್ಷೆ ಮೂಡಿದೆ.
ವಾರದ ಹಿಂದೆಯೇ ಎಸ್‌ಐಟಿ ಅಧಿಕಾರಿಗಳು ಮಾದರಿಯನ್ನು ಮರು ಪರೀಕ್ಷೆಗೆ ಕಳುಹಿಸಿದ್ದು, ಈಗ ವರದಿಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಮಾದರಿಯಲ್ಲಿ ಡಿಎನ್‌ಎ ಪತ್ತೆಯಾದರೆ, ಅದನ್ನು ಪ್ರಕರಣದಲ್ಲಿ ಆರೋಪ ಹೊತ್ತಿರುವ ವ್ಯಕ್ತಿಗಳ ಡಿಎನ್‌ಎ ಜೊತೆಗೆ ಹೋಲಿಕೆ ಮಾಡಿ ತನಿಖೆ ಮುಂದುವರಿಸಲು ಸಾಧ್ಯವಾಗಬಹುದು. ಇದರಿಂದ ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಗುವ ನಿರೀಕ್ಷೆಯಿದೆ.