ನ.15 ರಂದು ‘ಅಲೋಯ್ ಕ್ವಿಜ್ ವಿಝ್ 2026’ ರಸಪ್ರಶ್ನೆ ಸ್ಪರ್ಧೆ
ಮಂಗಳೂರು: ನಗರದ ಕೊಡಿಯಾಲಬೈಲ್ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ರೋಹನ್ ಕಾರ್ಪೊರೇಶನ್ ಸಹಯೋಗದಲ್ಲಿ ‘ಅಲೋಯ್ ಕ್ವಿಜ್ ವಿಝ್ 2026’ ರಸಪ್ರಶ್ನೆ ಸ್ಪರ್ಧೆ ನ.15ರಂದು ಮಧ್ಯಾಹ್ನ 2ರಿಂದ ನಗರದ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್ ಮಾಲ್‌ನ ಮೂರನೇ ಮಹಡಿಯಲ್ಲಿ ಆಯೋಜಿಸಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನೀಲ್ ರಾಡ್ರಿಗಸ್ ತಿಳಿಸಿದರು.
ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಲೋಯ್ ಕ್ವಿಜ್ ವಿಝ್’ ಸಾಮಾನ್ಯ ರಸಪ್ರಶ್ನೆ ಸ್ಪರ್ಧೆಗಳಿಗಿಂತ ಭಿನ್ನವಾಗಿದೆ. ಪ್ರತಿ ತಂಡದಲ್ಲಿ ಓರ್ವ ಅಂಧ ವಿದ್ಯಾರ್ಥಿ, ಓರ್ವ ಮಾತು ಮತ್ತು ಶ್ರವಣ ದೋಷದ ಒಬ್ಬ ವಿದ್ಯಾರ್ಥಿ, ಸರ್ಕಾರಿ ಶಾಲೆಯ ಓರ್ವ ಹಾಗೂ ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇರುತ್ತಾರೆ. ಹೀಗೆ ಐದು ವಿದ್ಯಾರ್ಥಿಗಳ ಒಟ್ಟು 10 ತಂಡಗಳು ಸ್ಪರ್ಧಿಸಲಿದ್ದು, ಐದು ತಂಡಗಳು ಅಂತಿಮ ಹಂತಕ್ಕೆ ಆಯ್ಕೆಯಾಗಲಿವೆ. ವಿಕಲಚೇತನ ಮಕ್ಕಳ ಸಾಮರ್ಥ್ಯವನ್ನು ಪರಿಚಯಿಸುವುದು ಹಾಗೂ ಎಲ್ಲ ಮಕ್ಕಳು ಸಹಜವಾಗಿ ಬೆರೆತು ತಂಡವಾಗಿ ಕಾರ್ಯನಿರ್ವಹಿಸಲು ಉತ್ತೇಜಿಸುವುದು ಸ್ಪರ್ಧೆಯ ಉದ್ದೇಶವಾಗಿದೆ ಎಂದರು.
ಬ್ರೈಲ್ ಲಿಪಿ ಆಧಾರಿತ ಪ್ರಶ್ನೆಗಳು, ಬಝರ್ ರಸಪ್ರಶ್ನೆ, ಕನ್ನಡ ಸುತ್ತು, ಮೂಕಾಭಿನಯ ಮತ್ತು ‘ಹಾರ್ಮನಿ ಇನ್ ಥಾಟ್’ ಸೇರಿ ಐದು ಸುತ್ತುಗಳಿವೆ. ಮೊದಲ ಎರಡು ಸ್ಥಾನ ಪಡೆದ ತಂಡಗಳಿಗೆ ಬಹುಮಾನ ಹಾಗೂ ಉತ್ತಮ ತಂಡಸ್ಪೂರ್ತಿ, ಸಹಕಾರ ಮತ್ತು ಒಳಗೊಳ್ಳುವಿಕೆ ತೋರಿದ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು. ಮಂಗಳೂರು ಕ್ವಿಜ್ ಫೌಂಡೇಷನ್ ಸ್ಪರ್ಧೆ ನಡೆಸಿಕೊಡಲಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಶಾಲಾ ಮುಖ್ಯಶಿಕ್ಷಕಿ ಜೋಸಿಟಾ ಸಿಕ್ವೇರಾ, ಉಪ ಮುಖ್ಯಶಿಕ್ಷಕ ಲಿಯಾ ಡಿಸೋಜಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಕ್ರಿಸ್ಟೋಫರ್ ಡಿಸೋಜಾ, ರೋಮನ್ ಆಂಡ್ ಕ್ಯಾಥರೀನ್ ಶಾಲಾ ಪ್ರಾಂಶುಪಾಲ ಕ್ಯಾಲಿಸ್ಟರ್ ಡೇಸಾ ಇದ್ದರು.