ಮಂಗಳೂರಿನಲ್ಲಿ ಐಟಿ ಉದ್ಯೋಗಿಗಳ ಸಂಖ್ಯೆ 900ರಿಂದ 2,500ಕ್ಕೆ ವಿಸ್ತರಣೆ

ಮಂಗಳೂರಿನಲ್ಲಿ ಐಟಿ ಉದ್ಯೋಗಿಗಳ ಸಂಖ್ಯೆ 900ರಿಂದ 2,500ಕ್ಕೆ ವಿಸ್ತರಣೆ


ಮಂಗಳೂರು: ಕರ್ನಾಟಕದಲ್ಲಿ ‘ಬಿಯಾಂಡ್ ಬೆಂಗಳೂರು’ (ಬೆಂಗಳೂರಿನಿಂದ ಹೊರಗೆ) ಯೋಜನೆಗೆ ಪುಷ್ಟಿ ನೀಡುವಂತೆ ಪ್ರಮುಖ ಜಾಗತಿಕ ತಂತ್ರಜ್ಞಾನ ಸಂಸ್ಥೆಯಾದ ಎನ್ಟಿಟಿ ಡೇಟಾ ಸಂಸ್ಥೆಯು ಮಂಗಳೂರಿನಲ್ಲಿ ಐಟಿ ಕ್ಷೇತ್ರದ ಉದ್ಯೋಗಿಗಳ ಸಂಖ್ಯೆಯನ್ನು ಪ್ರಸಕ್ತ 900ರಿಂದ 2027ಕ್ಕೆ 2,500ಕ್ಕೆ ವಿಸ್ತರಿಸುವುದಾಗಿ ಹೇಳಿದೆ.

ಬೆಂಗಳೂರಿನಲ್ಲಿ ಸೋಮವಾರ ರಾಜ್ಯದ ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಎನ್ಟಿಟಿ ಡೇಟಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ವಿಷಯವನ್ನು ಸಚಿವರೊಂದಿಗೆ ಹಂಚಿಕೊಂಡರು. 

ಎನ್ಟಿಟಿ ಡೇಟಾ ಸಂಸ್ಥೆಯ ಪರವಾಗಿ ಸಂಸ್ಥೆಯ ಅಧ್ಯಕ್ಷ ಹಾಗೂ ಕ್ಲೌಡ್ ಸೆಕ್ಯುರಿಟಿ ಜಾಗತಿಕ ಮುಖ್ಯಸ್ಥ ಚಾರ್ಲಿ ಲಿ, ಗ್ಲೋಬಲ್ ಬಿಸ್ನೆಸ್ ಯುನಿಟ್ನ ವಿಶ್ವವ್ಯಾಪಿ ಆಡಳಿತ ನಿರ್ದೇಶಕ ಐಮನ್ ಹುಸೇನ್, ಮುಖ್ಯ ಅಭಿವೃದ್ದಿ ಅಧಿಕಾರಿ ಶಶಿರ್ ಶೆಟ್ಟಿ ಮತ್ತು ವಿಜಯ್ ಟಿ.ಆರ್. ಭಾಗವಹಿಸಿದ್ದರು. ಸರ್ಕಾರದ ಪರವಾಗಿ ರಾಜ್ಯ ಸರಕಾರದ ಇಲೆಕ್ಟ್ರಾನಿಕ್ಸ್, ಐಟಿ,ಬಿಟಿ ಮತ್ತು ಎಸ್ ಆ?ಯಂಡ್ ಟಿಯ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಕೆಡಿಇಎಂನ ಸಿಇಒ ಸಂಜೀವ್ ಕುಮಾರ್ ಗುಪ್ತಾ ಉಪಸ್ಥಿತರಿದ್ದರು. 

ನಿವಿಯಸ್ ಸೊಲ್ಯೂಷನ್ಸ್ ಸ್ವಾಧೀನದ ಮೂಲಕ ಮಂಗಳೂರಿಗೆ ಪ್ರವೇಶಿಸಿರುವ ಎನ್ಟಿಟಿ ಡೇಟಾ ಸಂಸ್ಥೆ ಮಂಗಳೂರು ಮತ್ತು ಬೆಂಗಳೂರನ್ನು ಎಐ, ಕ್ಲೌಡ್ ಮತ್ತು ಡೇಟಾ ಪ್ರತಿಭೆಗೆ ಪ್ರಮುಖ ಕೇಂದ್ರಗಳಾಗಿ ಗುರುತಿಸಿದೆ. ಐಟಿ ಸೇವೆಗಳಿಗಿಂತ ಹೊರತಾಗಿ ಆರೋಗ್ಯ ಮತ್ತು ಜೀವ ವಿಜ್ಞಾನ, ಹೈಟೆಕ್, ಆಟೋಮೋಟಿವ್, ಉತ್ಪಾದನೆ, ಎಐ ಮತ್ತು ಡೇಟಾದಲ್ಲಿ ವಿಶೇಷ ಡೊಮೇನ್-ಆಧಾರಿತ ಸಾಮರ್ಥ್ಯಗಳನ್ನು ನಿರ್ಮಿಸಲು ಕಂಪನಿ ಉದ್ದೇಶಿಸಿದೆ. 

ಸರಕಾರದಿಂದ ಐಟಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಬೆಂಬಲವನ್ನು ಘೋಷಿಸಲಾಗಿದ್ದು, ಮಂಗಳೂರಿನ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಬಳಸಿಕೊಂಡು ಎಐ ಮತ್ತು ಡೊಮೇನ್ ಕೌಶಲ್ಯಗಳ ತರಬೇತಿ, ಮಂಗಳೂರಿನಲ್ಲಿ ಗುಣಮಟ್ಟದ ಕಚೇರಿ ಸ್ಥಳ ಮತ್ತು ಡೇಟಾ ಸೆಂಟರ್ಗಳಿಗೆ ಅನುಕೂಲ, ಏಕ-ಗವಾಕ್ಷಿ ತಂಡದ ಮೂಲಕ ಹೂಡಿಕೆ ಸುಗಮಗೊಳಿಸುವಿಕೆ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

‘ಕರ್ನಾಟಕದ ಅಭಿವೃದ್ಧಿಯ ಮುಂದಿನ ಅಧ್ಯಾಯ ಬೆಂಗಳೂರಿನಿಂದ ಹೊರಗಡೆ ಬರೆಯಲಾಗುತ್ತಿದ್ದು, ಇದರಲ್ಲಿ ಮಂಗಳೂರು ಮುಂಚೂಣಿಯಲ್ಲಿದೆ. ಮಂಗಳೂರಿನ ಬಗ್ಗೆ ಎನ್ಟಿಟಿ ಡೇಟಾ ಸಂಸ್ಥೆಯ ವಿಶ್ವಾಸ ನಮ್ಮ ಕರಾವಳಿ ನಗರಗಳ ಪ್ರತಿಭೆಗೆ ಸಾಕ್ಷಿಯಾಗಿದೆ. ಎನ್ಟಿಟಿ ಡೇಟಾ ಸಂಸ್ಥೆಯನ್ನು ಕೇವಲ ಹೂಡಿಕೆದಾರರಾಗಿ ಮಾತ್ರವಲ್ಲದೆ, ಪ್ರಗತಿಯಲ್ಲಿ ಪಾಲುದಾರರಾಗಿ ನಡುತ್ತಿದ್ದು, ಕರ್ನಾಟಕ ಸರಕಾರ ಪ್ರತಿ ಹಂತದಲ್ಲೂ ಸಹಕಾರ ನೀಡಲಿದೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article