ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ: 12 ದಿನಗಳ ನಿರಂತರ ಗಾಯನ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ: 6,700ಕ್ಕೂ ಅಧಿಕ ಗಾಯಕರು ಭಾಗಿ

ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ: 12 ದಿನಗಳ ನಿರಂತರ ಗಾಯನ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ: 6,700ಕ್ಕೂ ಅಧಿಕ ಗಾಯಕರು ಭಾಗಿ


ಮಂಗಳೂರು: ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್‌ನ  40ನೇ ವರ್ಷದ ಸಂಭ್ರಮದ ಅಂಗವಾಗಿ, ದಿ.ಎರಿಕ್ ಒಝಾರಿಯೊ  ಸ್ಮರಣಾರ್ಥ  ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಮಂಗಳೂರಿನ ಪುರಭವನದಲ್ಲಿ ಇಂದು ಮುಂಜಾನೆ 5 ಗಂಟೆಗೆ ಚಾಲನೆ ದೊರೆತಿದೆ.

15ರವರೆಗೆ ಈ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, 6,700ಕ್ಕೂ ಅಧಿಕ ಗಾಯಕರು ಭಾಗಿಯಾಗಲಿದ್ದಾರೆ.

ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ‘ಕೊಂಕಣಿ ನಿರೊಂತರಿ - ಸೊಂಸಾರ್ ಸೊರಾಸೊರಿ’ (ಜಗತ್ತಿನ ಕೊನೆಯವರೆಗೂ ನಿರಂತರ ಕೊಂಕಣಿ) ಎಂಬ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಯಲಿದೆ. ಸತತ 12 ದಿನಗಳ ಕಾಲ ನಿರಂತರ ಗಾಯನ ಮ್ಯಾರಥಾನ್ ಆಯೋಜಿಸಲಾಗಿದ್ದು, 300 ಗಾಯನ ತಂಡಗಳು ಸರದಿಯಂತೆ ಭಾಗವಹಿಸಲಿವೆ. ಜಗತ್ತಿನ ವಿವಿಧ ಭಾಗಗಳಿಂದ 6,700ಕ್ಕೂ ಅಧಿಕ ಗಾಯಕರು ಪಾಲ್ಗೊಳ್ಳಲಿದ್ದು, ಗೋವಾದ 53 ತಂಡಗಳು ಇದರಲ್ಲಿ ಸೇರಿವೆ. ವಿವಿಧ ಕೊಂಕಣಿ ಉಪಭಾಷೆಗಳು, ಸಮುದಾಯಗಳು ಮತ್ತು ಸಂಗೀತ ಪರಂಪರೆಗಳನ್ನು ಪ್ರತಿನಿಧಿಸುವ 4,500ಕ್ಕೂ ಅಧಿಕ ಹಾಡುಗಳನ್ನು ಯಾವುದೇ ಹಾಡು ಅಥವಾ ಗಾಯಕನ ಪುನರಾವರ್ತನೆಯಿಲ್ಲದೆ ಪ್ರಸ್ತುತಪಡಿಸುವ ಗುರಿ ಹೊಂದಲಾಗಿದೆ

ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಚಾಲನೆ ನೀಡಿ, ಗೋವಾದ ಹೊರಗಿನ ಕೊಂಕಣಿ ಸಾಧಕರನ್ನೂ ಗೋವಾ ಸರ್ಕಾರ ತನ್ನ ಅಧಿಕೃತ ರಾಜ್ಯ ಪ್ರಶಸ್ತಿಗಳಿಗೆ ಪರಿಗಣಿಸುತ್ತದೆ. ಕೊಂಕಣಿ ಭಾಷೆಯಲ್ಲಿ ಉಪಭಾಷೆಗಳು ಬದಲಾಗಬಹುದು, ಆದರೆ ಕೊಂಕಣಿ ಜನರ ಹೃದಯ ಮತ್ತು ಭಾಷೆಯ ಭಾವನೆ ಒಂದೇ ಆಗಿದೆ ಎಂದರು. 

ಮಂಗಳೂರಿನ ಕೊಂಕಣಿ ಭಾಷಿಕರು ಯಾವುದೇ ಸರ್ಕಾರಿ ವ್ಯವಸ್ಥೆಗಳ ನೆರವಿಲ್ಲದೆ ತಮ್ಮ ಪರಿಶ್ರಮ ಮತ್ತು ಸಮರ್ಪಣೆಯಿಂದ ಭಾಷೆಯನ್ನು ಜೀವಂತವಾಗಿಟ್ಟಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಗೋವಾ ಮತ್ತು ಕರಾವಳಿ ಕರ್ನಾಟಕ ರಾಜ್ಯಗಳ ಗಡಿಗಳು ಬೇರೆಬೇರೆಯಾಗಿದ್ದರೂ, ಎರಡೂ ಪ್ರದೇಶಗಳು ಒಂದೇ ಕರಾವಳಿ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಹಂಚಿಕೊಂಡಿವೆ. ಈ ಸಾಂಸ್ಕೃತಿಕ ಬಾಂಧವ್ಯ ಸದಾಕಾಲ ಮುಂದುವರಿಯಲಿ ಎಂದು ಆಶಿಸಿದರು. 

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಆಶೀರ್ವಚನ ನೀಡಿದರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗೋವಾದ ಶಾಸಕರಾದ ಮೈಕಲ್ ಲೋಬೋ ಮತ್ತು ದೆಲಿಲಾ ಲೋಬೋ, ಸ್ವಾಗತ ಸಮಿತಿ ಸದಸ್ಯ ಡಾಲ್ಫಿ ಪ್ರಶಾಂತ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಜಾಯ್ಸ್ ಒಝಾರಿಯೊ, ರಾಯ್ ಕ್ಯಾಸ್ಟೆಲಿನೊ, ಪ್ರಕಾಶ್ ಶೆಟ್ಟಿ ಮಂಗಳೂರು, ಎರಿಕ್ ಕೊರೆಯಾ, ರೊನಾಲ್ಡ್ ಸಿಲ್ವನ್ ಡಿಸೋಜ ಹಾಗೂ ಕೃಷ್ಣಪ್ರಸಾದ್ ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ. ಪಿಂಟೊ, ರೈನೆಲ್ ಸಿಕ್ವೇರಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article