ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ತೃಪ್ತಿ, ಸೇವಾವಕಾಶ: ಡಾ. ಸಜ್ಜನ್ ಶೆಣೈ
Monday, November 2, 2026
ಮಂಗಳೂರು: ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಕ್ಯಾರಿಯರ್ ಟಾಕ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಸಂಧಿವಾತ ಮತ್ತು ರೋಗನಿರೋಧಕ ಶಾಸ್ತ್ರ ವಿಭಾಗದ ವೈದ್ಯರಾದ ಡಾ. ಸಜ್ಜನ್ ಶೆಣೈ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವೈದ್ಯಕೀಯ ಕ್ಷೇತ್ರದ ಮಹತ್ವ, ವೈದ್ಯರಾಗುವ ಹಾದಿ, ವೃತ್ತಿಯಲ್ಲಿನ ಸವಾಲುಗಳು ಹಾಗೂ ಸಮಾಜಕ್ಕೆ ಸಲ್ಲಿಸಬಹುದಾದ ಸೇವೆಯ ಕುರಿತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಂಡು, ಶಿಸ್ತು, ನಿರಂತರ ಪರಿಶ್ರಮ ಮತ್ತು ಬದ್ಧತೆಯಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯ ಸಿದ್ಧತೆ, ವೈದ್ಯಕೀಯ ಕಾಲೇಜುಗಳ ಆಯ್ಕೆ ಹಾಗೂ ಮುಂದಿನ ಶೈಕ್ಷಣಿಕ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಂವಾದಾತ್ಮಕವಾಗಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಕಾರ್ಯಕ್ರಮದಲ್ಲಿ ಕೋಚಿಂಗ್ ಹೆಡ್ ಕರುಣಾಕರ ಬಳ್ಕೂರು, ಹಿಂದಿ ವಿಭಾಗದ ಉಪನ್ಯಾಸಕಿ ಅಶ್ವಿನಿ ಪೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು.

