ಪುತ್ತೂರು: ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೂ ಮನೆಯ ಮಕ್ಕಳು ಮಲಗಿ ನಿದ್ರಿಸುತ್ತಿದ್ದರೆ ಏನು ಮಾಡಲು ಸಾಧ್ಯವಿಲ್ಲ ಆದ್ದರಿಂದ ಚೆಲುವ ಕನ್ನಡ ನಾಡು ಉದಯವಾಗಬೇಕಾದರೆ ಕನ್ನಡ ಮತ್ತು ಕರ್ನಾಟಕದ ಪ್ರಾಚೀನ ಪರಂಪರೆ ಆದಿಕವಿ ಪಂಪನಿಂದ ಆಧುನಿಕ ಕವಿಗಳ ವರೆಗೆ ಕನ್ನಡದ ಕಂಪನ್ನು ಪಸರಿಸಿದ ಎಲ್ಲರನ್ನೂ ನೆನೆಯುವುದು ಮತ್ತು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಕೆ. ತಿಳಿಸಿದರು.
ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘ, ಯಕ್ಷ ಕಲಾಕೇಂದ್ರ, ವಿದ್ಯಾರ್ಥಿ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಕನ್ನಡದ ಪ್ರಾಚೀನತೆಯನ್ನು ಅರಿತು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರೂ ಆದ ಡಾ. ವಿಜಯ ಕುಮಾರ್ ಮೊಳೆಯಾರ ಇವರು ‘ಮಾತೃಭಾಷೆಯನ್ನು ಮರೆಯುವುದು ನಮ್ಮ ಬೇರುಗಳನ್ನು ಕಡಿದುಕೊಂಡಂತೆ. ಆದ್ದರಿಂದ ನಮ್ಮ ಬೇರುಗಳನ್ನು ಉಳಿಸಿಕೊಂಡು, ವಿಜ್ಞಾನ-ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು’ ಎಂದು ಮಾರ್ಗದರ್ಶನ ನೀಡಿದರು.
ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿ, ಅಂತಿಮ ಬಿಎಸ್ಸಿ. ಯ ವಿದುಷಿ ವಿಂದ್ಯಾಶ್ರೀ ರೈ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದುಕೊಳ್ಳುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕನ್ನಡ ರಾಜ್ಯೋತ್ಸವ ಮತ್ತು ಡಾ. ಜಿ.ಎಸ್. ಶಿವರುದ್ರಪ್ಪನವರ ಶತಮಾನೋತ್ಸವದ ಸವಿ ನೆನಪಿಗಾಗಿ ಏರ್ಪಡಿಸಿದ ಕನ್ನಡ ಆಶುಭಾಷಣ ಮತ್ತು ಡಾ. ಜಿ.ಎಸ್. ಶಿವರುದ್ರಪ್ಪನವರ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಯಕ್ಷ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶೈಕ್ಷಣಿಕ ಕುಲ ಸಚಿವರಾದ ಡಾ. ನೋರ್ಬರ್ಟ್ ಮಸ್ಕರೇನಸ್, ಹಣಕಾಸು ಅಧಿಕಾರಿಗಳಾದ ಡಾ. ಎಡ್ವಿನ್ ಡಿ’ಸೋಜಾ, ಯಕ್ಷ ಕಲಾ ಕೇಂದ್ರದ ಸಂಯೋಜಕಿ ಸುರಕ್ಷಾ ಎಸ್. ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಭಾರತಿ ಎಸ್. ರೈ, ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರಾಧ್ಯಾಪಕ ವೃಂದದವರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾನಸ ಮತ್ತು ಅಪರ್ಣ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ರಾಧಾಕೃಷ್ಣ ಗೌಡ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಪ್ರಶಾಂತಿ ಎನ್. ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಶ್ರೀ ವಿದ್ಯಾ ಹಾಗೂ ಸಭಾ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಪ್ರತಿಭಾ ಶೆಟ್ಟಿ ಅವರು ನಿರೂಪಿಸಿದರು.