ಶಕುಂತಳಾ ಶೆಟ್ಟಿ ಅವರ ಆತ್ಮಕಥನ ಸಮಾಜಕ್ಕೆ ವಿವೇಕವನ್ನು ನೀಡಿದೆ: ದೇರ್ಲ

ಶಕುಂತಳಾ ಶೆಟ್ಟಿ ಅವರ ಆತ್ಮಕಥನ ಸಮಾಜಕ್ಕೆ ವಿವೇಕವನ್ನು ನೀಡಿದೆ: ದೇರ್ಲ


ಮಂಗಳೂರು: ಸಾಮಾಜಿಕ ನ್ಯಾಯ ನೀಡುವುದು ನೆಲ ಮಟ್ಟದಲ್ಲಿ ಬೆಳೆದು ಬಂದ ರಾಜಕಾರಣಿಗೆ ಮಾತ್ರ ಸಾಧ್ಯವಾಗುತ್ತದೆ. ಶಕುಂತಳಾ ಶೆಟ್ಟಿ ಅವರು ಈ ವರ್ಗದಲ್ಲಿ ಗುರುತಿಸಿಕೊಳ್ಳುವವರು, ಅವರು ತನ್ನ ಆತ್ಮಕಥನದಲ್ಲಿ ನೈತಿಕತೆಗೆ ಆದ್ಯತೆಯನ್ನು ನೀಡಿದ್ದಾರೆ, ಈ ಕೃತಿಯು ಸಮಾಜಕ್ಕೆ ವಿವೇಕವನ್ನು ನೀಡಿದೆ ಎಂದು ಲೇಖಕ ನರೇಂದ್ರ ರೈ ದೇರ್ಲ ಹೇಳಿದರು.

ಮಂಗಳೂರು ತುಳು ಭವನದಲ್ಲಿ ಗುರುವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರಾವಳಿ ಲೇಖಕಿಯರ ಸಂಘ ಮತ್ತು ಆಕೃತಿ ಆಶಯ ಪ್ರಕಾಶನ  ಸಹಯೋಗದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರ ‘ತುಳುವೆರೆ ತಿಂಗೊಲ್ದ ಪೊಲಬು’ ಹಾಗೂ ‘ಚಿತ್ತ ಭಿತ್ತಿಯ ಪತ್ತಾಯ’ ಆತ್ಮಕಥನ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಕೃತಿ ಪರಿಚಯಿಸಿ ದೇರ್ಲ ಅವರು ಮಾತನಾಡಿದರು.

ಶಕುಂತಳಾ ಶೆಟ್ಟಿ ಅವರ ಕೃತಿಯಲ್ಲಿ ನೈತಿಕತೆಯ ವಿಚಾರದಲ್ಲಿ ಮಹಿಳೆಯ ನೋವು, ಸಂಕಟ ಎಲ್ಲವೂ ಇದರಲ್ಲಿ ಕಾಣಿಸಿಕೊಂಡಿದೆ. ಶೆಟ್ಟರು ಕಾಲುನಡಿಗೆಯ ಮೂಲಕ ಬಂದ ರಾಜಕಾರಣಿಯಾಗಿದ್ದಾರೆ. ಆ ಕಾರಣದಿಂದಾಗಿ ಸಾಮಾಜಿಕ ನ್ಯಾಯದ ಪರ ಆಸ್ಥೆ ವಹಿಸಿ ಕೆಲಸ ಮಾಡಿದ್ದಾರೆ ಎಂದು ನರೇಂದ್ರ ರೈ ದೇರ್ಲ ಹೇಳಿದರು.

ರಾಜಕೀಯ ತ್ಯಾಗದ ಉಲ್ಲೇಖವಿಲ್ಲ:

ಕೃತಿಯಲ್ಲಿ ರಾಜಕಾರಣದ ಕುರಿತು ಬಹಳಷ್ಟು ಕುತೂಹಲ ಇಟ್ಟುಕೊಂಡು ಓದುವ ಮಂದಿಗೆ ಎಲ್ಲಿಯೂ ಅವರು ರಾಜಕೀಯವನ್ನು ತ್ಯಾಗ ಮಾಡಿದ ಅಂಶವನ್ನು ಬೆಳಕು ಚೆಲ್ಲುವ ಕೆಲಸವನ್ನು ಮಾಡಿಲ್ಲ. ಆದರೆ ಕನ್ನಡ ಸಾಹಿತ್ಯದಲ್ಲಿ ಇದೊಂದು ಮತ್ತೊಂದು ಆತ್ಮಚರಿತ್ರೆಯಾಗುವ ಬದಲು ಸಮಾಜಕ್ಕೆ ಇದೊಂದು ದೊಡ್ಡ ವಿವೇಕವನ್ನು ನೀಡಿದೆ ಎಂದರು.

‘ತುಳುವೆರೆ ತಿಂಗೊಲ್ದ ಪೊಲಬು’ ಕೃತಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಪರಿಚಯಿಸಿ, ಈ ಕೃತಿಯಲ್ಲಿ ತುಳುವಿನ ಬಹಳ ಅಪರೂಪದ ಶಬ್ದಗಳನ್ನು ಬಳಕೆ ಮಾಡಿದ್ದಾರೆ. ಪ್ರತಿ ತಿಂಗಳು ತುಳುನಾಡಿನಲ್ಲಿ ಆಚರಣೆಯಲ್ಲಿರುವ ವಿಚಾರಗಳನ್ನು ಬಹಳ ಸರಳವಾಗಿ ನಿರೂಪಿಸಿದ್ದಾರೆ ಎಂದರು.

ಕೃತಿಕಾರರಾದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಶಾಲೆಯಲ್ಲಿ ಇದ್ದಾಗ ಕವನಗಳನ್ನು ಬರೆದಿದ್ದೇನೆ, ಬಳಿಕ ಮದುವೆಯಾಗುತ್ತಿದ್ದಂತೆ ಎಲ್ಲವೂ ಬಿಟ್ಟು ಬಿಟ್ಟೆ. ಆ ಬಳಿಕ ಯುವಜನ ಮೇಳ, ಆಕಾಶವಾಣಿಯ ಮೂಲಕ ಮತ್ತೆ ಬರವಣಿಗೆಯನ್ನು ಮುಂದುವರಿಸಿಕೊಂಡು ಬಂದೆ, ನಂತರ ರಾಜಕಾರಣಕ್ಕೆ ಬಂದಾಗ ಎಲ್ಲವೂ ನಿಂತು ಬಿಟ್ಟಿತ್ತು. ಈಗ ಮತ್ತೆ ಬರವಣಿಗೆಯನ್ನು ಆರಂಭ ಮಾಡಿದ್ದೇನೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ರಾಜಕೀಯ ಧುರೀಣರಾಗಿದ್ದ ಪುತ್ತೂರು ರಾಮ್ ಭಟ್ ಅವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ರಾಜಕಾರಣಿ ಯಾಗಿ ಶಕುಂತಳಾ ಶೆಟ್ಟಿ ಅವರು ತನ್ನ ನೈತಿಕ ನಿಲುವಿನ ಮೂಲಕ ವಿಶಿಷ್ಟ ಮನ್ನಣೆಯನ್ನು ಪಡೆದುಕೊಂಡಿದ್ದಾರೆ ಎಂದರು. 

ಹಿರಿಯ ಲೇಖಕಿ, ಸಂಶೋಧಕಿ ಬಿ.ಎಂ. ರೋಹಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಕಾರ್ಯದರ್ಶಿ ಕೃಷ್ಣವೇಣಿ ಉಪಸ್ಥಿತರಿದ್ದರು. ಆಕೃತಿ ಆಶಯ ಪಬ್ಲಿಕೇಶನ್‌ನ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಸ್ವಾಗತಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article