ಮಧ್ಯರಾತ್ರಿ ಕಾರ್ಯಾಚರಣೆ: ಸಮುದ್ರಕ್ಕೆ ಬಿದ್ದ ಮೀನುಗಾರನ ರಕ್ಷಿಸಿದ ಕೋಸ್ದ್‌ಗಾರ್ಡ್
ಸಮುದ್ರಕ್ಕೆ ಬಿದ್ದ ಮೀನುಗಾರನನ್ನು ಕೋಮರ ರಾಮು ಎಂದು ಗುರುತಿಸಲಾಗಿದೆ.
ನವೆಂಬರ್ 1ರಂದು ಮಂಗಳೂರಿನಿಂದ ಸುಮಾರು ೫೪ ನಾಟಿಕಲ್ ಮೈಲು (100 ಕಿ.ಮೀ.) ದೂರದಲ್ಲಿ ‘ಶಿವ ಸಾಗರ್’ ಎಂಬ ದೋಣಿ (IFB) ಮೀನುಗಾರಿಕೆಯಲ್ಲಿ ತೊಡಗಿತ್ತು. ಈ ವೇಳೆ ಬಲೆ ಎಳೆಯುತ್ತಿದ್ದ ಮೀನುಗಾರರೊಬ್ಬರು ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದಾರೆ. ದೋಣಿಯಲ್ಲಿದ್ದ ಇತರ ಮೀನುಗಾರರು ತಕ್ಷಣವೇ ಅವರನ್ನು ನೀರಿನಿಂದ ಮೇಲೆತ್ತಿದರಾದರೂ, ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿತ್ತು. ಹೀಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ನೆರವು ಕೋರಿದ್ದರು.
ದೋಣಿಯಿಂದ ಬಂದ ತುರ್ತು ಕರೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಕೋಸ್ಟ್ ಗಾರ್ಡ್‌ನ CGDHQ-3, `ICGS C-448' ನೌಕೆಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿತು. ಮಧ್ಯರಾತ್ರಿಯ ದಟ್ಟ ಕತ್ತಲಿನ ನಡುವೆಯೇ ಕಾರ್ಯಾಚರಣೆ ನಡೆಸಿದ ನೌಕೆಯ ಸಿಬ್ಬಂದಿ ಮೀನುಗಾರಿಕಾ ದೋಣಿಯನ್ನು ಪತ್ತೆಹಚ್ಚಿದರು. ಆತಂಕಕ್ಕೊಳಗಾಗಿದ್ದ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ, ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರು.
ನಂತರ ಅವರನ್ನು NMPA ಜೆಟ್ಟಿಗೆ ಕರೆತರಲಾಯಿತು. ಅಲ್ಲಿಂದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಪ್ರಕಟಣೆ ತಿಳಿಸಿದೆ