ವಂದೇ ಭಾರತ್ ರೈಲನ್ನು ಮಂಗಳೂರು ಸೆಂಟ್ರಲ್ ಮೂಲಕ ಸಂಚರಿಸಲು ಆಗ್ರಹ
ಈ ಕುರಿತು ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನ.11 ರಂದು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಯಶವಂತಪುರ-ಮಡಗಾಂವ್ ವಂದೇ ಭಾರತ್ ರೈಲನ್ನು ಮಂಗಳೂರು ಸೆಂಟ್ರಲ್ ಮೂಲಕ ಆರಂಭಿಸುವುದು ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಈ ರೈಲು ಈಗಾಗಲೇ ಮಂಗಳೂರು ಸೆಂಟ್ರಲ್‌ಗೆ ಬರುತ್ತಿದ್ದ ಮಡಗಾಂವ್?ಮಂಗಳೂರು ಸೆಂಟ್ರಲ್ ವಂದೇ ಭಾರತ್ ರೈಲಿನ ವಿಸ್ತರಣೆಯಾಗಿರುವುದರಿಂದ, ಮಂಗಳೂರು ಸೆಂಟ್ರಲ್‌ನಿಂದಲೇ ಸಂಚಾರ ಆರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರೈಲ್ವೆ ಇಲಾಖೆ ಈ ಹಿಂದೆ ಮಂಗಳೂರು ಸೆಂಟ್ರಲ್ ಮೂಲಕ ರೈಲು ಸಂಚರಿಸಲು ನಿರ್ಧರಿಸಿ, ಸೆ.೧೦ರಂದು ಯಶವಂತಪುರ-ಮಂಗಳೂರು ಸೆಂಟ್ರಲ್ ನಡುವೆ ಪ್ರಾಯೋಗಿಕ ಸಂಚಾರವನ್ನೂ ನಡೆಸಿತ್ತು. ಆದರೆ ಬಳಿಕ ಈ ನಿರ್ಧಾರ ಬದಲಾಯಿಸಿರುವುದು ಪ್ರಯಾಣಿಕರಲ್ಲಿ ನಿರಾಸೆ ಮೂಡಿಸಿದೆ ಎಂದು ಸಮಿತಿ ಹೇಳಿದೆ.
ಮಂಗಳೂರು ಸೆಂಟ್ರಲ್ ನಿಲ್ದಾಣವು ಪ್ರಮುಖ ವಾಣಿಜ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬಹು ವಿಶೇಷ ಆಸ್ಪತ್ರೆಗಳಿಗೆ ಸಮೀಪದಲ್ಲಿದೆ. ಅಲ್ಲದೆ ಕೊಲ್ಲೂರು, ಮುರುಡೇಶ್ವರ, ಗೋಕರ್ಣ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಗೋವಾದ ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರಿಗೂ ಈ ನಿಲ್ದಾಣ ಅನುಕೂಲಕರವಾಗಿದೆ.
ಮಂಗಳೂರು ಜಂಕ್ಷನ್‌ಗೆ ನಗರದ ಪ್ರಮುಖ ಪ್ರದೇಶಗಳಿಂದ ತಲುಪಲು ಸೂಕ್ತ ಹಾಗೂ ಕಡಿಮೆ ವೆಚ್ಚದ ಸಾರಿಗೆ ಸೌಲಭ್ಯಗಳ ಕೊರತೆಯಿದೆ. ಸುರತ್ಕಲ್ ಮತ್ತು ಬಂಟ್ವಾಳ ಭಾಗದ ಪ್ರಯಾಣಿಕರಿಗೂ ಮಂಗಳೂರು ಸೆಂಟ್ರಲ್ ಹೆಚ್ಚು ಅನುಕೂಲಕರವಾಗಲಿದೆ. ಮಂಗಳೂರು ಸೆಂಟ್ರಲ್ ಮೂಲಕ ರೈಲು ಸಂಚರಿಸಿದರೆ ಪ್ರಯಾಣದ ಅವಧಿ 10ರಿಂದ 15 ನಿಮಿಷ ಹೆಚ್ಚಾಗಬಹುದಾದರೂ, ಇದರಿಂದ ಜನರಿಗೆ ದೊರೆಯುವ ಅನುಕೂಲ ಹೆಚ್ಚಿನದು ಎಂದು ಸಮಿತಿಯ ಹನುಮಂತ ಕಾಮತ್ ತಿಳಿಸಿದ್ದಾರೆ.