‘ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ’: ಸಚಿವ ಅಶ್ವಿನಿ ವೈಷ್ಣವ್

‘ಕೊಂಕಣ ರೈಲ್ವೆ ವಿಲೀನಕ್ಕೆ ನಾಲ್ಕು ರಾಜ್ಯಗಳ ಒಪ್ಪಿಗೆ ಅಗತ್ಯ’: ಸಚಿವ ಅಶ್ವಿನಿ ವೈಷ್ಣವ್


ಮಂಗಳೂರು: ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಸ್ತಾವನೆಗೆ ಕರ್ನಾಟಕ ಸೇರಿದಂತೆ ನಾಲ್ಕು ಪಾಲುದಾರ ರಾಜ್ಯಗಳ ಒಪ್ಪಿಗೆ ಅಗತ್ಯವಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಗುರುವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊಂಕಣ ರೈಲ್ವೆ ವಿಲೀನ, ಮಂಗಳೂರು-ಬೆಂಗಳೂರು ರೈಲು ಮಾರ್ಗದ ದ್ವಿಪಥ ಕಾಮಗಾರಿ ಹಾಗೂ ವಂದೇ ಭಾರತ್ ರೈಲು ಸಂಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದರು.

ಕೊಂಕಣ ರೈಲ್ವೆ ನಿಗಮದಲ್ಲಿ ಕೇಂದ್ರ ಸರ್ಕಾರದ ಜತೆಗೆ ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳೂ ಪಾಲುದಾರಿಕೆ ಹೊಂದಿವೆ. ಹೀಗಾಗಿ ಈ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ನಿರ್ಧಾರ ಕೈಗೊಳ್ಳಲು ನಾಲ್ಕೂ ರಾಜ್ಯಗಳ ಸಮ್ಮತಿ ಅನಿವಾರ್ಯವಾಗಿದೆ. ಈ ಸಂಬಂಧ ಈಗಾಗಲೇ ರಾಜ್ಯಗಳಿಗೆ ಮನವಿ ಸಲ್ಲಿಸಲಾಗಿದೆ. ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳಿಂದ ಒಪ್ಪಿಗೆ ದೊರೆತ ಬಳಿಕ ವಿಲೀನ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮಂಗಳೂರು-ಬೆಂಗಳೂರು ಘಾಟ್ ಮಾರ್ಗದ ದ್ವಿಪಥಕ್ಕೆ ಸಿದ್ಧತೆ

ಮಂಗಳೂರು-ಬೆಂಗಳೂರು ರೈಲು ಮಾರ್ಗದ ದ್ವಿಪಥ ಕಾಮಗಾರಿಗೂ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಯೋಜನೆಗೆ ಸಂಬಂಧಿಸಿದ ಅಂತಿಮ ಸ್ಥಳ ಸಮೀಕ್ಷೆ (FLS) ಪೂರ್ಣಗೊಂಡಿದ್ದು, ಇದೀಗ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.

ಪಶ್ಚಿಮ ಘಟ್ಟದ ದುರ್ಗಮ ಭೌಗೋಳಿಕ ಪ್ರದೇಶದಲ್ಲಿ ರೈಲು ಮಾರ್ಗ ನಿರ್ಮಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಈಗಿರುವ ಹಳಿಯಲ್ಲಿರುವಂತೆ ತೀವ್ರ ಏರು-ಇಳಿಜಾರು ಸಮಸ್ಯೆ ಉಂಟಾಗದಂತೆ ಎರಡನೇ ಹಳಿಯನ್ನು ಹೆಚ್ಚು ಅನುಕೂಲಕರವಾದ ಸಾಧಾರಣ ಇಳಿಜಾರಿನೊಂದಿಗೆ ನಿರ್ಮಿಸಲು ಹೊಸ ವಿನ್ಯಾಸ ರೂಪಿಸಲಾಗುತ್ತಿದೆ. ಇದರಿಂದ ಘಾಟ್ ಪ್ರದೇಶದಲ್ಲಿ ರೈಲು ಸಂಚಾರವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉಡುಪಿಯಲ್ಲಿ ಎಫ್‌ಎಂ ರೇಡಿಯೋ ಟ್ರಾನ್ಸ್ಮಿಟರ್ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದರು. ಎಂ.ಬಿ. ಪಾಟೀಲ್ ಆರೋಪಕ್ಕೆ ತಿರುಗೇಟು

ಕರ್ನಾಟಕಕ್ಕೆ ರೈಲ್ವೆ ಯೋಜನೆಗಳ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಸಚಿವ ಎಂ.ಬಿ. ಪಾಟೀಲ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ವೈಷ್ಣವ್, ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಳ್ಳಿಹಾಕಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದ ರೈಲ್ವೆ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು ೭೫ ಸಾವಿರ ಕೋಟಿ ರೂ. ಮೊತ್ತದ ರೈಲ್ವೆ ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ಬುಲೆಟ್ ರೈಲು, ವಂದೇ ಭಾರತ್, ವಂದೇ ಭಾರತ್ ಸ್ಲೀಪರ್ ರೈಲು ಹಾಗೂ ರೈಲು ನಿಲ್ದಾಣಗಳ ಆಧುನೀಕರಣದಂತಹ ಮಹತ್ವದ ಯೋಜನೆಗಳಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ರೈಲ್ವೆ ಕ್ಷೇತ್ರದಲ್ಲಿ ಎಷ್ಟು ಅನುದಾನ ನೀಡಲಾಗಿತ್ತು ಎಂಬುದನ್ನು ಸಚಿವ ಎಂ.ಬಿ. ಪಾಟೀಲ್ ಅವರೇ ತಿಳಿಸಲಿ ಎಂದು ತಿರುಗೇಟು ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article