ಸೌಜನ್ಯ ಪ್ರಕರಣ: ಮಾವ ಸಹಿತ ಐವರ ವಿಚಾರಣೆ
ಮಂಗಳೂರು: ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಯನ್ನು ಚುರುಕುಗೊಳಿಸಿರುವ ಎಸ್‌ಐಟಿ ಇಂದು ಮಂಗಳೂರು ಕಚೇರಿಯಲ್ಲಿ
ಸೌಜನ್ಯಾಳನ್ನು ಕೊನೆಯದಾಗಿ ನೋಡಿದ ಐವರು ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದೆ.
ಸೌಜನ್ಯಾ ಮಾವ ವಿಠಲ ಗೌಡ, ಸಾಕ್ಷಿಗಳಾದ ಕೃಷ್ಣಪ್ಪ, ಪುರಂದರ ಗೌಡ, ಯಶೋಧ ಮತ್ತು ಅವರ ಪುತ್ರ ಪ್ರತೀಕ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. ಈ ಐವರ ಹೇಳಿಕೆಗಳನ್ನು ಎಸ್‌ಐಟಿ ತಂಡವು ದಾಖಲಿಸಿಕೊಂಡಿದೆ. ಎಸ್‌ಐಟಿ ಕಚೇರಿಗೆ ತನಿಖಾಧಿಕಾರಿ ಲೋಕೇಶ್ ಮತ್ತು ಸಹ ತನಿಖಾಧಿಕಾರಿ ಮನೋಜ್ ನಾಯಕ್ ಅವರು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.
ಮರುತನಿಖೆಗೆ ಆದೇಶ ಸಿಕ್ಕ ಬೆನ್ನಲ್ಲೇ ಎಸ್‌ಐಟಿ ತಂಡವು ಹಲವು ಮಹತ್ವದ ವಿಚಾರಣೆಗಳನ್ನು ನಡೆಸಿದೆ. ಈ ಹಿಂದಿನ ತನಿಖಾ ಸಂಸ್ಥೆಗಳಿಂದಲೂ ಕೂಡ ದಾಖಲೆಗಳನ್ನು ಮತ್ತು ಮಾಹಿತಿಯನ್ನು ಎಸ್‌ಐಟಿ ತಂಡ ಸಂಗ್ರಹಿಸಿದೆ. ಸೌಜನ್ಯಾ ಹತ್ಯೆಯಾದ ಸ್ಥಳ ಮತ್ತು ಆಕೆಯ ಮೃತದೇಹ ಸಿಕ್ಕ ಸ್ಥಳದಲ್ಲಿ ಮಹಜರು ಕೂಡ ನಡೆಸಲಾಗಿತ್ತು. ಪ್ರಸ್ತುತ, ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದೆ.