ದೀಪಾವಳಿ ಸಂಭ್ರಮದ ನಡುವೆ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ: ಡಿಎಚ್ಒ ಡಾ. ತಿಮ್ಮಯ್ಯ ಹೆಚ್.ಆರ್. ಕರೆ
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಅವಘಡಗಳನ್ನು ತಡೆಗಟ್ಟಲು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿವರ್ಷ ಪಟಾಕಿ ಅವಘಡಗಳಿಂದ ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದು, ಮುಖಕ್ಕೆ ತೀವ್ರ ಗಾಯಗಳಾಗುವ ಘಟನೆಗಳು ವರದಿಯಾಗುತ್ತಿವೆ. ಇಂತಹ ಅಪಾಯಗಳನ್ನು ತಪ್ಪಿಸಲು ಅಪಾಯಕಾರಿ ಸಿಡಿಮದ್ದುಗಳ ಬಳಕೆಯನ್ನು ತ್ಯಜಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯ, ಹೊಗೆ ಮತ್ತು ಕಸದ ಸಮಸ್ಯೆಯೂ ಉಂಟಾಗುತ್ತದೆ. ಹೀಗಾಗಿ ಬೆಳಕಿನ ಹಬ್ಬವನ್ನು ದೀಪಗಳ ಮೂಲಕವೇ ಆಚರಿಸುವುದು ಸೂಕ್ತ. ಪಟಾಕಿ ಸಿಡಿಸುವುದು ಅನಿವಾರ್ಯವಾದಲ್ಲಿ ಬೆಳಕು ನೀಡುವ, ಸಿಡಿಯದ ಸುರುಸುರುಬತ್ತಿಗಳನ್ನು ಮಾತ್ರ ಬಳಸಬೇಕು. ಅದೂ ಕೂಡ ಮಕ್ಕಳನ್ನು ಒಬ್ಬರೇ ಬಿಡದೆ, ದೊಡ್ಡವರ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿ ಆಚರಿಸಬೇಕು ಎಂದು ತಿಳಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಜಿಲ್ಲೆಯ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ಸನ್ನದ್ಧಗೊಳಿಸಲಾಗಿದೆ. ಗಾಯಾಳುಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.
ಕಣ್ಣಿಗೆ ಪಟಾಕಿ ತಗುಲಿ ಗಂಭೀರ ಗಾಯಗಳಾದಲ್ಲಿ ತ್ವರಿತ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗವನ್ನು ಸಜ್ಜುಗೊಳಿಸಲಾಗಿದೆ. ಪಟಾಕಿ ಅವಘಡಗಳಿಂದ ಗಾಯಗೊಂಡು ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ವಿಳಂಬವಿಲ್ಲದೆ ತುರ್ತು ಚಿಕಿತ್ಸೆ ನೀಡುವಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳಿಗೆ ಆರೋಗ್ಯ ಇಲಾಖೆ ವತಿಯಿಂದ ಸೂಚನೆ ನೀಡಲಾಗಿದೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಶಾಶ್ವತ ದೃಷ್ಟಿದೋಷ ಅಥವಾ ಅಂಗವೈಕಲ್ಯ ಉಂಟಾಗದಂತೆ ವಿಶೇಷ ಮುತುವರ್ಜಿ ವಹಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಕೋರಲಾಗಿದೆ ಎಂದು ಡಾ. ತಿಮ್ಮಯ್ಯ ಹೆಚ್.ಆರ್. ತಿಳಿಸಿದ್ದಾರೆ.