‘ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕು’: ನಾಗತಿಹಳ್ಳಿ ಚಂದ್ರಶೇಖರ್

‘ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕು’: ನಾಗತಿಹಳ್ಳಿ ಚಂದ್ರಶೇಖರ್


ಮಂಗಳೂರು: ಸಾವಧಾನರ ಹಿತವಾದ ಬದುಕಿನಲ್ಲಿ ನಾವು ಸಾಗುತ್ತಿದ್ದೇವೆ. ಆದರೆ, ಈ ವೇಗದ ಬದುಕಿನಲ್ಲಿ ಮೊಟ್ಟಮೊದಲು ಬಲಿಯಾಗುವುದು ಭಾಷೆ. ವೇಗದ ಜೀವನಶೈಲಿಯಲ್ಲಿ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕು ಎಂದು ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. 

ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನದ ವತಿಯಿಂದ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾನಿಲಯದವರೆಗೆ ಕನ್ನಡ ಭಾಷೆಯ ಬೆಳವಣಿಗೆಗೆ ಆದ್ಯತೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಈಗ ಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆ ಕುಸಿತದಿಂದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಯಾಗುತ್ತಿವೆ. ಈ ಸವಾಲುಗಳ ನಡುವೆಯೇ ನಾವು ಇಂದಿನ ಮಕ್ಕಳಿಗೆ ಭಾಷೆಯನ್ನೂ ಹೇಳಿಕೊಡುತ್ತಿಲ್ಲ. ಜತೆಗೆ ಬದುಕಿಗೆ ಬೇಕಾದಂತಹ ಜೀವನ ಮೌಲ್ಯಗಳನ್ನೂ ತಿಳಿಸಿಕೊಡುವ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದರು.

ಕನ್ನಡ ಅನ್ನದ ಭಾಷೆಯಲ್ಲ, ಕನ್ನಡದಿಂದ ಬದುಕಲು ಅವಕಾಶವಿಲ್ಲ ಎಂಬ ನಿರ್ಲಕ್ಷ್ಯದ ಮಾತುಗಳಿಂದ ಕನ್ನಡವು ಮಕ್ಕಳಿಂದ ದೂರವಾಗುತ್ತಿದೆ. ಇಂತಹ ನಿರ್ಲಕ್ಷ್ಯಗಳಿಂದಲೇ ವೈವಿಧ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಕನ್ನಡದ ಆಮದು ರಫ್ತುಗಳನ್ನು ಹೆಚ್ಚಿಸಬೇಕಿದೆ. ಅದು ಭಾಷಾಂತರದ ಮೂಲಕ ಅಥವಾ ಬೇರೆ ಬೇರೆ ವಿಧಾನದ ಮೂಲಕ ಕನ್ನಡದ ಘನತೆಯನ್ನು ಹೆಚ್ಚಿಸುವಂತಹ ಕೆಲಸ ಆಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಮಂಗಳೂರು ವಿವಿಯಲ್ಲಿ ಕನ್ನಡ ಭಾಷೆ, ಅಧ್ಯಯನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದೀಗ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಲ್ವರು ಸಾಹಿತಿಗಳ ಕನ್ನಡ ಕೃತಿಗಳನ್ನು ತುಳುವಿಗೆ ಭಾಷಾಂತರಗೊಳಿಸುವ ಯೋಜನೆ ರೂಪಿಸಲಾಗಿದೆ. ವಿವಿಯಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆ ಆರಂಭಿಸಲಾಗಿದೆ ಎಂದರು.

ಕುಲಸಚಿವ ಸಂತೋಷ್ ಬಿ.ಜಗಲ ಸಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಧನಂಜಯ ಕುಂಬ್ಳೆ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಮೋಹನ್ ಎಸ್.ಸಿಂಘೆ, ಕಾರ್ಯಕ್ರಮ ಸಂಯೋಜಕ ಪ್ರಶಾಂತ್ ನಾಯಕ್ ಭಾಗವಹಿಸಿದ್ದರು.

ಉಪನ್ಯಾಸಕ ಯಶುಕುಮಾರ್ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವತಿಯಿಂದ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಕನ್ನಡ ಗಾನ ವೈವಿಧ್ಯದ ಹಾಡುಗಳ ವಿಶೇಷ ಪ್ರಸ್ತುತಿ ಹಾಗೂ ಭರತನಾಟ್ಯ ಕಾರ್ಯಕ್ರಮ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ, ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಸಂಪಾದಕತ್ವದಲ್ಲಿ ಆರಂಭಗೊಂಡ ಮಾಸಿಕ ಪತ್ರಿಕೆ ‘ಮಂಗಳಧ್ವನಿ’ಯನ್ನು ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆಗೊಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article