ಚರ್ಚ್ ಧರ್ಮಗುರು ಬಾಲಕರಿಗೆ ಕಿರುಕುಳ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲು ‘ಒಡನಾಡಿ’ ಒತ್ತಾಯ

ಚರ್ಚ್ ಧರ್ಮಗುರು ಬಾಲಕರಿಗೆ ಕಿರುಕುಳ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲು ‘ಒಡನಾಡಿ’ ಒತ್ತಾಯ

ಮಂಗಳೂರು: ನಗರದ ಸೈಂಟ್ ವಿನ್ಸೆಂಟ್ ಫೆರಾರ್ ಚರ್ಚ್‌ನ ಧರ್ಮಗುರು ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಗಂಭೀರವಾಗಿದ್ದು, ವಿಶೇಷ ತನಿಖಾ ದಳ ರಚಿಸಿ ತನಿಖೆ ನಡೆಸಬೇಕು ಎಂದು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಒತ್ತಾಯಿಸಿದೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಕೆ.ವಿ. ಅವರು, ಈ ಪ್ರಕರಣದಲ್ಲಿ ಈಗಾಗಲೇ ದಾಖಲಾಗಿರುವ ಎಫ್‌ಐಆರ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿ, ಪ್ರಕರಣದ ಬಗ್ಗೆ ಪೂರ್ವ ಮಾಹಿತಿ ಹೊಂದಿದ್ದರೂ ಕಾನೂನು ಕ್ರಮಕ್ಕೆ ವರದಿ ಮಾಡದೆ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ. ಇದರಲ್ಲಿ ಪೊಲೀಸರು, ಮಂಗಳೂರು ಕ್ರೈಸ್ತ ಧರ್ಮಪ್ರಾಂತಕ್ಕೆ ಸಂಬಂಧಪಟ್ಟ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಭೇಕು ಎಂದು ಆಗ್ರಹಿಸಿದರು.

ಧರ್ಮಗುರುವಿನಿಂದ ಎಂಟು ಬಾಲಕರಿಗೆ ಲೈಂಗಿಕ ದೌರ್ಜನ್ಯವಾಗಿದ್ದು, ಈ ಬಗ್ಗೆ ತಮ್ಮ ಪೋಷಕರಲ್ಲಿ ಹೇಳಿದ್ದಾರೆ. ಇವರಲ್ಲಿ ಐವರು ಬಾಲಕರು ಬಿಷಪ್ ಅವರಿಗೆ ಲಿಖಿತ ದೂರನ್ನು ನೀಡಿದ್ದಾರೆ. ಇದಕ್ಕೆ ಸೂಕ್ತ ಕ್ರಮದ ಬಗ್ಗೆ ಬಿಷಪ್ ಭರವಸೆ ನೀಡಿದ್ದರು. ತನ್ನ ಗಮನಕ್ಕೆ ಬಂದ ಬಳಿಕವೂ ಪೊಕ್ಸೋ ಕಾಯ್ದೆ 2012ರ ಸೆಕ್ಷನ್ 19 ಮತ್ತು 21ರ ಪ್ರಕಾರ ಪೊಲೀಸ್ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡದೆ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿರುವ ಸಂಬಂಧಪಟ್ಟ ವ್ಯಕ್ತಿಗಳನ್ನು ಕೂಡಾ ಪೊಕ್ಸೋ ಮೊಕದ್ದಮೆಯಲ್ಲಿ ಆರೋಪಿಗಳನ್ನಾಗಿ ಮಾಡಬೇಕು. ಇಷ್ಟು ಮಾತ್ರವಲ್ಲದೆ ಈ ಪ್ರಕರಣ ಪೋಷಕರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಗಮನಕ್ಕೆ ತಂದಿದ್ದು, ನಿರ್ದೇಶನಾಲಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನಿರ್ದೇಶನವನ್ನು ನೀಡಿ ತಿಂಗಳಾದರೂ ಯಾವುದೇ ಕ್ರಮ ಜರುಗಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶುರಾಮ ಎಂ.ಎಲ್. ಮಾತನಾಡಿ, ಹಲವು ವರ್ಷಗಳ ಹಿಂದೆ ಇದೇ ಧರ್ಮಗುರು ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಇ-ಮೇಲ್ ಮೂಲಕ ಯುವಕನೊಬ್ಬ ದೂರಿದ್ದಾನೆ. ಸುಮಾರು 25ಕ್ಕೂ ಅಧಿಕ ವರ್ಷಗಳಿಂದ ಈ ಧರ್ಮಗುರು ಇನ್ನಷ್ಟು ಮಂದಿಗೆ ಲೈಂಗಿಕ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಈ ಮೂಲಕ ಆರೋಪಿ ಮಕ್ಕಳ ಪೀಡಕ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕಾರಣದಿಂದ ಸರಕಾರ ಇದನ್ನು ಕೂಲಂಕಷವಾಗಿ ತನಿಖೆ ಮಾಡಬೇಕಾದ ಅನಿವಾರ್ಯವಿದೆ. ಶೀಘ್ರ ಕ್ರಮಕೈಗೊಳ್ಳುವಂತೆ ಒಡನಾಡಿ ಸಂಸ್ಥೆ ಗೃಹ ಸಚಿವರು, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಬಾಲ ನ್ಯಾಯ ಮಂಡಳಿಗೆ, ಪೊಲೀಸ್ ಆಯುಕ್ತರಿಗೆ, ಮಂಗಳೂರು ಸಹಾಯಕ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಆಸ್ಕರ್ ಲೂಯಿಸ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article